Advertisement

ಹುಸಿ ಬಾಂಬ್‌ ಕರೆ ಮಾಡಿದವ ಸೆರೆ

11:25 AM Sep 13, 2017 | Team Udayavani |

ಬೆಂಗಳೂರು: ವಿಧಾನಸೌಧ ಮತ್ತು ನೆಹರು ತಾರಾಲಯದಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಪೊಲೀಸರಿಗೆ ಹುಸಿ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಮದ್ದೂರಿನಲ್ಲಿ ಬಂಧಿಸಿದ್ದಾರೆ. ಮಂಡ್ಯ ಮೂಲದ ಶ್ರೀಧರ್‌(22) ಬಂಧಿತ. ಪಿಯುಸಿ ಓದಿರುವ ಆರೋಪಿ, ಯುವಕರಿಗೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ.

Advertisement

ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿ ಇದೇ ರೀತಿ ಮಾಡಿ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾನೆ. ಈ ರೀತಿ ಹಣ ಕಳೆದುಕೊಂಡವರ ಪೈಕಿ ಇಬ್ಬರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದಾಗ, ಅವರನ್ನೇ ಪೊಲೀಸರಿಗೆ ಹಿಡಿದುಕೊಡಲು ಹುಸಿ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯ ಬಳಿಯ ನಾಗರಾಜ್‌ ಎಂಬುವರ ಮಾಲೀಕತ್ವದ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಇಲ್ಲಿಯೇ ಬಾಡಿಗೆ ಕೊಠಡಿಯೊಂದರಲ್ಲಿ ನೆಲೆಸಿದ್ದ. ಈ ವೇಳೆ ಶ್ರೀಧರ್‌, ಮಾಲೀಕ ನಾಗರಾಜ್‌ನ ಬಳಿ ನಾನು ಸರ್ಕಾರಿ ಕೆಲಸ ಕೊಡಿಸುತ್ತೇನೆ. ಹಲವು ಮಂದಿ ಪರಿಚಯವಿದ್ದಾರೆ ಎಂದು ಹೇಳಿಕೊಂಡಿದ್ದ.

ಇದನ್ನು ನಂಬಿದ್ದ ನಾಗರಾಜ್‌, ಎಂಜಿನಿಯರಿಂಗ್‌ ವ್ಯಾಸಂಗ ಮುಗಿಸಿ ಗೋದ್ರೆಜ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ಸುರೇಶ್‌ಗೆ ಶ್ರೀಧರ್‌ನನ್ನು ಪರಿಚಯಿಸಿಕೊಟ್ಟಿದ್ದರು. ಸುರೇಶ್‌ಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಶ್ರೀಧರ್‌ ಭರವಸೆ ನೀಡಿದ್ದ.ಅಲ್ಲದೆ, 60 ಸಾವಿರ ರೂ. ಮುಂಗಡ ಹಣ ಪಡೆದಿದ್ದ.

ಆದರೆ, ಮೂರು ತಿಂಗಳಾದರೂ ಕೆಲಸ ಕೊಡಿಸಿರಲಿಲ್ಲ. ಇದನ್ನು ಪ್ರಶ್ನಿಸಿದರೆ, ಸಬೂಬು ಹೇಳುತ್ತಿದ್ದ. ಇದರಿಂದ ಬೇಸತ್ತ ಸುರೇಶ್‌ ಮತ್ತು ನಾಗರಾಜ್‌ ಹಣ ವಾಪಸ್‌ ಕೊಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಆರೋಪಿ ಮೂರು ಕಂತಿನಲ್ಲಿ 30 ಸಾವಿರ ಹಣ ಮರಳಿಸಿದ್ದ.

Advertisement

ಸೆ.10ರೊಳಗೆ ಬಾಕಿ ಹಣ ನೀಡದಿದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಇಬ್ಬರು ಬೆದರಿಸಿದಾಗ, ಆರೋಪಿ ತನ್ನ ಬಳಿಯಿದ್ದ ಲ್ಯಾಪ್‌ಟಾಪ್‌ ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದ. ನನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಕ್ಕೆ ಕುಪಿತಗೊಂಡಿದ್ದ ಶ್ರೀಧರ್‌, ಇಬ್ಬರನ್ನು ಪೊಲೀಸರಿಗೆ ಹಿಡಿದುಕೊಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ವಿವರಿಸಿದರು.

“ನಮ್ಮ-100’ಕ್ಕೆ ಕರೆ: ಸೋಮವಾರ ಮಧ್ಯಾಹ್ನ “ನಮ್ಮ-100′ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಶ್ರೀಧರ್‌,ನನ್ನ ಹೆಸರು ಸುರೇಶ್‌, ನಾಗರಾಜ್‌ ಎಂಬ ವ್ಯಕ್ತಿ ಸೆ.25ರೊಳಗೆ ವಿಧಾನಸೌಧ ಮತ್ತು ನೆಹರು ತಾರಾಲಯಕ್ಕೆ ಬಾಂಬ್‌ ಇಡಲಿದ್ದಾನೆ. ಅದನ್ನು ತಡೆಯಿರಿ ಎಂದು ನಾಗರಾಜ್‌ನ ಮೊಬೈಲ್‌ ಸಂಖ್ಯೆ ಕೊಟ್ಟು ಕರೆ ಸ್ಥಗಿತಗೊಳಿಸಿದ್ದ.

ಮೊಬೈಲ್‌ ಅನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದ ಶ್ರೀಧರ್‌ ಚಿತ್ರದುರ್ಗಕ್ಕೆ ಹೋಗಿದ್ದ. ಆಗಾಗ್ಗೆ ಮೊಬೈಲ್‌ ಆನ್‌ ಆ್ಯಂಡ್‌ ಆಫ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಸಂಪರ್ಕಿಸಿದಾಗ ಕರೆ ಸ್ಥಗಿತಗೊಳಿಸುತ್ತಿದ್ದ ಎನ್ನಲಾಗಿದೆ. ಕರೆ ಜಾಡನ್ನೇ ಹಿಡಿದು, ಶ್ರೀಧರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮೇಲಿನ ಸಂಗತಿ ಬಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next