ಉಳ್ಳಾಲ: ಅವಳಿ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಛೋಟಾ ರಾಜನ್ ಸಹಚರನನ್ನು ಕೊಣಾಜೆ ಪೊಲೀಸರು ಮುಂಬಯಿಯಲ್ಲಿ ವಶಕ್ಕೆ ಪಡೆದು ಕೊಂಡಿದ್ದಾರೆ. ಉಡುಪಿ ಶಿರ್ವ ಮೂಲದ ವಿನೇಶ್ ಶೆಟ್ಟಿ(44) ಬಂಧಿತ ಆರೋಪಿ.
2003ರಲ್ಲಿ ಬಂಟ್ವಾಳ ತಾಲೂಕಿನ ಮುಡಿಪು ಇರಾ ರಸ್ತೆಯ ಮೂಳೂರು ಕ್ರಾಸ್ ಬಳಿ ಕಪ್ಪಕಲ್ಲು ಕೋರೆ ಮಾಲಕ ವೇಣುಗೋಪಾಲ ನಾೖಕ್ ಮತ್ತು ಅವರ ಜೀಪು ಚಾಲಕ ಸಂತೋಷ್ ಕೊಲೆಗೆ ಸಂಬಂಧಿಸಿದಂತೆ ವಿನೇಶ್ ಸಹಿತ ಏಳು ಮಂದಿ ಆರೋಪಿಗಳಿದ್ದಾರೆ.
ಅವರಲ್ಲಿ ಐದು ಮಂದಿ ಆರೋಪಿಗಳು ಆರೋಪ ಮುಕ್ತರಾಗಿದ್ದು ವಿನೇಶ್ ಹಾಗೂ ಎರಡನೇ ಆರೋಪಿ ಲೋಕೇಶ್ ಬಂಗೇರ ಜಾಮೀನಿನ ಮೇಲೆ ಬಿಡುಗಡೆಗೊಂಡು ತನಿಖೆ ಎದುರಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮುಂಬಯಿಯಲ್ಲಿ ಭೂಗತನಾಗಿದ್ದ ವಿನೇಶ್ ಶೆಟ್ಟಿ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿಯಾಗಿತ್ತು. ಮುಂಬಯಿಯ ಥಾಣೆಯ ಕೋರ್ಟ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೊರ್ಟ್‌ಗೆ ಹಾಜರಾಗಲು ಬಂದಿದ್ದ ವಿನೇಶ್‌ನನ್ನು ಕೊಣಾಜೆ ಪೊಲೀಸರು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.
ಪೃಥ್ವಿರಾಜ್ ಕೊಲೆಗೆ ಪ್ರತಿಕಾರ: ಕುದೊRàಳಿ ನಿವಾಸಿ ಪೃಥ್ವಿರಾಜ್‌ನನ್ನು ಮುಡಿಪುವಿನ ಬಾರ್‌ನಲ್ಲಿ 2012ರಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ನಾರ್ಯ ನಡಿಗುತ್ತು ನಿವಾಸಿ ಪೃಥ್ವಿರಾಜ್ ಸಂಬಂಧಿ ವೇಣುಗೋಪಾಲ್ ನಾೖಕ್ ನಡೆಸಿದ್ದು ಎಂದು ಪ್ರತಿಕಾರವಾಗಿ ಪೃಥ್ವಿರಾಜ್‌ಸ್ನೇಹಿತ ವಿನೇಶ್ ಶೆಟ್ಟಿ , ಲೋಕೇಶ್ ಬಂಗೇರ ಸೇರಿಕೊಂಡು ಮುಡಿಪಿನ ಇರಾ-ಮೂಳೂರು ರಸ್ತೆಯ ಮಧ್ಯ ಪ್ರದೇಶದ ತಿರುವಲ್ಲಿ ವೇಣುಗೋಪಾಲ ನಾಯ್ಕ ಮತ್ತು ಅವರ ಜೀಪು ಚಾಲಕ ಸಂತೋಷ್ ಅವರನ್ನು ಕೊಚ್ಚಿ ಕೊಲೆಗೈದಿದ್ದರು. ಬಳಿಕ ಮುಂಬಯಿಯಲ್ಲಿ ತಲೆ ಮರೆಸಿಕೊಂಡಿದ್ದ ವಿನೇಶ್ ಶೆಟ್ಟಿ ಕೊಲೆಯಾದ ಆರು ವರ್ಷಗಳ ಬಳಿಕ ಮುಂಬಯಿಯಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ವೇಣುಗೋಪಾಲ್ ನಾೖಕ್ ಕೊಲೆಯ ವಿಚಾರಣೆಗೆಂದು ಮಂಗಳೂರಿಗೆ ಕರೆತಂದಿದ್ದ ವಿನೇಶ್ 2015ರಲ್ಲಿ ಜಾಮೀನು ಪಡೆದು ಮುಂಬಯಿಯಲ್ಲಿ ತಲೆಮರೆಸಿಕೊಂಡಿದ್ದ ಭೂಗತನಾಗಿದ್ದ.ವಿನೇಶ್ ವಿರುದ್ಧ ಮಂಗಳೂರು ಸತ್ರ ನ್ಯಾಯಾಲಯವು ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ವಿನೀಶ್ ಶೋಧ ಕಾರ್ಯದಲ್ಲಿ ತೊಡಗಿದ್ದ ಕೊಣಾಜೆ ಪೊಲೀಸರು ಶನಿವಾರ ಮುಂಬಯಿಯಲ್ಲಿ ಆರೋಪಿಯನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ.
ಮುಂಬಯಿಯಲ್ಲಿ ನಾಲ್ಕು ಕೊಲೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ, ಮಂಗಳೂರಿನಲ್ಲಿ ಎರಡು ಕೊಲೆ, ದಾವಣಗೆರೆ ಡಕಾಯಿತಿ ಪ್ರಕರಣ, ಪುಣೆಯ ಅಹಮ್ಮದ್ ನಗರದಲ್ಲಿ 3 ಕೋಟಿ ರೂ. ಹವಾಲಾ ಹಣ ಲೂಟಿಗೈದ ಪ್ರಕರಣದಲ್ಲಿ ಈತ ಪ್ರಮುಖನಾಗಿದ್ದ. ಛೋಟಾ ರಾಜನ್ ಸಹಚರನಾಗಿದ್ದ ಈತ ಬಳಿಕ ಹೇಮಂತ್ ಪೂಜಾರಿ ಜತೆಗೆ ಕುಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಣಾಜೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಅಶೋಕ್, ಪಿಎಸ್‌ಐ ಸುಕುಮಾರನ್, ಸಿಬಂದಿ ಶಿವಪ್ರಸಾದ್, ಮಹೇಶ್, ಉಮೇಶ್ ರಾಥೋಡ್, ಅಶೋಕ್ ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ತೊಡಗಿದ್ದರು.