Advertisement

ಬಂದೀಖಾನೆ ತಿದ್ದುಪಡಿ ಮಸೂದೆ ಅಂಗೀಕಾರ: ವಿಪಕ್ಷಗಳ ಸಭಾತ್ಯಾಗ

12:07 AM Mar 24, 2022 | Team Udayavani |

ಬೆಂಗಳೂರು: ಜೈಲುಗಳಲ್ಲಿ ಮೊಬೈಲ್‌ ಅಥವಾ ಇತರ ಸಂಪರ್ಕ ಸಾಧನಗಳನ್ನು ನಿಷೇಧಿಸುವ ಹಾಗೂ ಕೈದಿ ಪೆರೋಲ್‌ ಅವಧಿ ಮುಕ್ತಾಯಗೊಂಡ ಮೇಲೆ ಖುದ್ದಾಗಿ ಹಾಜರಾಗಲು ತಪ್ಪಿದರೆ ಜಾಮೀನುದಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತ ಕರ್ನಾಟಕ ಬಂದೀಖಾನೆ (ತಿದ್ದುಪಡಿ) ಮಸೂದೆ-2022 ಅನ್ನು ವಿರೋಧಿಸಿ ವಿಪಕ್ಷಗಳು ಬುಧವಾರ ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡಿದ್ದು, ಈ ನಡುವೆಯೇ ಮಸೂದೆಗೆ ಅಂಗೀಕಾರ ದೊರಕಿತು.

Advertisement

ತಿದ್ದುಪಡಿ ಮಸೂದೆ ಕುರಿತ ವಿಪಕ್ಷಗಳ ಆಕ್ಷೇಪಣೆ ಹಾಗೂ ಸಂದೇಹಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು. ಆದರೆ, ಸಚಿವರ ಸ್ಪಷ್ಟೀಕರಣ ಸಮಾಧಾನ ತಂದಿಲ್ಲ. ಹಾಗಾಗಿ ಮಸೂದೆಯನ್ನು ವಿರೋಧಿಸಿ ಸಭಾತ್ಯಾಗ ಮಾಡುತ್ತಿರುವುದಾಗಿ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು. ಕಾಂಗ್ರೆಸ್‌ ಸದಸ್ಯರು ಅವರ ಜತೆ ಹೊರನಡೆದರು. ಇದೊಂದು ಜನವಿರೋಧಿ ಮಸೂದೆಯಾಗಿದೆ ಎಂದು ಜೆಡಿಎಸ್‌ ಹಿರಿಯ ಸದಸ್ಯ ಮರಿತಿಬ್ಬೇಗೌಡ ನೇತೃತ್ವದಲ್ಲಿ ಜೆಡಿಎಸ್‌ ಸದಸ್ಯರೂ ಸಹ ಸಭಾತ್ಯಾಗ ಮಾಡಿದರು.

ಮಸೂದೆಯು ಜನವಿರೋಧಿ ಅಲ್ಲ, ಅಪರಾಧಿಗಳ ವಿರೋಧಿಯಾಗಿದ್ದು, ವಿಪಕ್ಷದವರು ಅಪರಾಧಿಗಳ ಪರ ಸಭಾತ್ಯಾಗ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಡಿಸಿದ ತಿದ್ದುಪಡಿ ಮಸೂದೆ ಪ್ರಸ್ತಾವನೆಗೆ ಧ್ವನಿಮತದ ಅಂಗೀಕಾರ ದೊರಕಿತು.

ಜಾಮರ್‌ ಅಳವಡಿಸಿ
ಮೊಬೈಲ್‌ ಮತ್ತಿತರ ವಸ್ತುಗಳ ಜೈಲಿನೊಳಗೆ ಸಿಗುವುದಕ್ಕೆ ಅಧಿಕಾರಿಗಳೇ ಕಾರಣ. ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಂಡರೆ ಎಲ್ಲವೂ ಸರಿ ಹೋಗುತ್ತದೆ. ಜೈಲುಗಳಲ್ಲಿ ಜಾಮರ್‌ಗಳನ್ನು ಅಳವಡಿಸಬೇಕು. ಪರೋಲ್‌ ಮೇಲೆ ಹೊರಬಂದು ಅವಧಿ ಮುಗಿದ ಅನಂತರ ಹಾಜರಾಗದ ಕೈದಿಗಳಿಗೆ ಜಾಮೀನು ನೀಡಿದವರನ್ನು ಶಿಕ್ಷಿಸುವುದು ಅಮಾನವೀಯ. ಈ ರೀತಿ ಆದರೆ, ಜಾಮೀನು ಕೊಡಲು ಯಾರೂ ಮುಂದೆ ಬರುವುದಿಲ್ಲ. ಅಮಾಯಕರಿಗೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪಿಸಿದ ವಿಪಕ್ಷ ಸದಸ್ಯರು, ಈ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಹಿಳೆಯರಿಗೆ ಪ್ರತ್ಯೇಕ ಜೈಲು ಮಾಡಿ
ಅದೇ ರೀತಿ ಜೈಲು ಕೈಪಿಡಿಯಲ್ಲಿ ಸುಧಾರಣೆ ತರಬೇಕು. ಅಧಿಕಾರಿಗಳು ಸರಿ ಇದ್ದರೆ ತಿದ್ದುಪಡಿ ಅಗತ್ಯವಿಲ್ಲ. ಅಧಿಕಾರಿಗಳನ್ನು ಬಿಗಿ ಮಾಡಬೇಕು. ಜೈಲು ಸುಧಾರಣಾ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಸುವಂತೆ ಸರಕಾರ ನೋಡಿಕೊಳ್ಳಬೇಕು. ಅಧಿಕಾರಿಗಳಿಗೆ ದಂಡಿಸುವ ಅಂಶವನ್ನು ಮಸೂದೆಯಲ್ಲಿ ಸೇರಿಸಬೇಕು. ಮಹಿಳಾ ಕೈದಿಗಳಿಗೆ ಪ್ರತ್ಯೇಕ ಜೈಲುಗಳನ್ನು ಮಾಡಬೇಕು ಎಂದು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು ಸಲಹೆ ನೀಡಿದರು.

Advertisement

ಸದುದ್ದೇಶದ ತಿದ್ದುಪಡಿ
ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ, ಹೈಕೋರ್ಟ್‌ ಆದೇಶದಂತೆ ತಿದ್ದುಪಡಿ ತರಲಾಗುತ್ತಿದ್ದು, ಸದುದ್ದೇಶದಿಂದ ಈ ಮಸೂದೆ ಮಂಡಿಸಲಾಗಿದೆ. ಕಾನೂನು ಭಯ ಇರಬೇಕು. ಪರೋಲ್‌ ಕೈದಿಗಳಿಗೆ ಜಾಮೀನು ನೀಡಿದವರಿಗೆ ಶಿಕ್ಷಿಸುವ ಉದ್ದೇಶ ಸರಕಾರಕ್ಕಿಲ್ಲ. ಜಾಮೀನು ದಂಧೆಕೋರರನ್ನು ಮಟ್ಟಹಾಕಲು ಕಠಿನ ಕ್ರಮಗಳ ಅಗತ್ಯವಿದೆ. ಜೈಲುಗಳಲ್ಲಿ ಫೋನ್‌ ಮತ್ತಿತರರ ವಸ್ತುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ 83 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪರೋಲ್‌ ಪಡೆದ 173 ಕೈದಿಗಳು ತಪ್ಪಿಸಿಕೊಂಡಿದ್ದರು. ಕಷ್ಟಪಟ್ಟು 158 ಮಂದಿಯನ್ನು ಬಂಧಿಸಲಾಗಿದೆ. 15 ಮಂದಿ ಇನ್ನೂ ಸಿಕ್ಕಿಲ್ಲ. ಜೈಲುಗಳಲ್ಲಿ ಅತ್ಯಾಧುನಿಕ ಜಾಮರ್‌ ಅಳವಡಿಸಲು 60 ಕೋಟಿ ರೂ. ಬೇಕು ಎಂದು ವಿವರಿಸಿದರು.

ಮಸೂದೆ ಕುರಿತು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕಾಂಗ್ರೆಸ್‌ ಸದಸ್ಯರಾದ ಗೋವಿಂದರಾಜು, ನಸೀರ್‌ ಅಹ್ಮದ್‌, ಸಲೀಂ ಅಹ್ಮದ್‌, ಯು.ಬಿ. ವೆಂಕಟೇಶ್‌, ಡಿ. ತಿಮ್ಮಯ್ಯ, ಪಿ.ಆರ್‌. ರಮೇಶ್‌, ಪ್ರಕಾಶ್‌ ರಾಥೋಡ್‌, ಜೆಡಿಎಸ್‌ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಎಸ್‌.ಎಲ್‌. ಭೋಜೇಗೌಡ, ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ರಮೇಶ್‌ಗೌಡ, ಗೋವಿಂದರಾಜು, ಬಿ.ಎಂ. ಫಾರೂಕ್‌, ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ್‌, ಎಂ.ಕೆ. ಪ್ರಾಣೇಶ್‌, ಎನ್‌. ರವಿಕುಮಾರ್‌, ತೇಜಸ್ವಿನಿ ಗೌಡ, ಭಾರತಿ ಶೆಟ್ಟಿ, ಡಿ.ಎಸ್‌. ಅರುಣ್‌, ಪಿ.ಎಚ್‌. ಪೂಜಾರ್‌, ಪ್ರತಾಪಸಿಂಹ ನಾಯಕ್‌ ಮಾತನಾಡಿದರು.

ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕಕ್ಕೆ ಚಿಂತನೆ: ಆರಗ ಜ್ಞಾನೇಂದ್ರ
ಬೆಂಗಳೂರು: ರಾಜ್ಯದಲ್ಲಿ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕ ಮಾಡಿಕೊಂಡು ವಿಶೇಷ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹಿಜಾಬ್‌ ವಿಚಾರದಲ್ಲಿ ನಿಯಮ 69ರಡಿ ನಡೆದ ಚರ್ಚೆ ಸಂದರ್ಭ ಬಿಜೆಪಿಯ ಎ.ಎಸ್‌. ಪಾಟೀಲ್‌ ನಡಹಳ್ಳಿ ಮಾತನಾಡುವ ಸಂದರ್ಭ ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಮಧ್ಯಪ್ರವೇಶಿಸಿ ರಾಜ್ಯದಲ್ಲಿ ಇಂಟಲಿಜೆನ್ಸ್‌ ಜೀವಂತವಾಗಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಗುಪ್ತಚರ ಇಲಾಖೆ ಸತ್ತು ಹೋಗಿದೆ ಎಂದು ಹೇಳಿದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎಸ್‌.ಈಶ್ವರಪ್ಪ, ರಾಜ್ಯದಲ್ಲಿ ಗುಪ್ತಚರ ಇಲಾಖೆ ಇಲ್ಲದಿದ್ದರೆ, ನಾವ್ಯಾರು ಬದುಕಿರುತ್ತಿರಲಿಲ್ಲ. ನಾನು ಒಂದು ದಿನ ರೈಲಿನಲ್ಲಿ ಬರುವಾಗ ನಿನ್ನ ಮುಗಿಸುತ್ತೇವೆ ಎಂದು ಒಂದು ಫೋನ್‌ ಬರುತ್ತದೆ. ನಾನು ಸಂಬಂಧಪಟ್ಟವರಿಗೆ ಮಾಹಿತಿ ಕೊಟ್ಟೆ. ಜೀವ ಉಳಿಸಿಕೊಂಡೆ ಎಂದರು.

ಈ ಸಂದರ್ಭದಲ್ಲಿ ಸ್ಪೀಕರ್‌ ಕಾಗೇರಿ, ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಕ್ರಿಯವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು. ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಅದಕ್ಕಾಗಿ ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕಾತಿ ಮತ್ತು ತರಬೇತಿ ನೀಡಲು ಚಿಂತನೆ ನಡೆಸಿದ್ದೇವೆ ಎಂದು ಗೃಹ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next