Advertisement

ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವೆ

12:34 PM Nov 13, 2018 | Team Udayavani |

ಕೆ.ಆರ್‌.ನಗರ: ನನ್ನ ಜತೆ ಇದ್ದವರು ಮತ್ತು ನಾನು ಬೆಳಸಿದವರೇ ನನಗೆ ಮೋಸ ಮಾಡಿ ಹೋದರು. ಆದರೆ ನನ್ನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿದ ಜನತೆ ನನ್ನ ಕೈಬಿಡಲಿಲ್ಲ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಹೇಳಿದರು.

Advertisement

ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ ಸಿಮೆಂಟ್‌ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಹಾಗೂ ಕಾಲಭೈರವೇಶ್ವರ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಭೇದ ಮಾಡದೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದ್ದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಾತಿ, ಹಣ ಸಾಕಷ್ಟು ಕೆಲಸ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು. 

ತಾಲೂಕಿನ ಈ ಹಿಂದಿನ ರಾಜಕಾರಣದಲ್ಲಿ ಜನತಾದಳ ಗೆದ್ದರೆ ಒಕ್ಕಲಿಗರು ಮತ್ತು ಕಾಂಗ್ರೆಸ್‌ ಗೆದ್ದರೆ ಕುರುಬರು ಪ್ರಾಬಲ್ಯ ಮೆರೆಯುತ್ತಿದ್ದರು. ತಾವು ಶಾಸಕರಾಗಿ ಆಯ್ಕೆಯಾದ ಮೇಲೆ ಎಲ್ಲಾ ಜಾತಿಯವರು ಸಮವಾದ ಅಧಿಕಾರವನ್ನು ಕೊಟ್ಟು ಕೆಲಸ ಮಾಡುತ್ತಿದ್ದರೂ ಕೆಲವರು ತಮಗೆ ಜಾತಿ ಪಟ್ಟಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ತಾಲೂಕಿನ ಜನತೆ ನನ್ನ ಜತೆ ಇರುವ ತನಕ ಇದು ಸಾಧ್ಯವಿಲ್ಲ ಎಂದು ಹೇಳಿದರು. 

ಚನ್ನಂಗೆರೆ ಗ್ರಾಮಕ್ಕೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು, ಮುಖ್ಯರಸ್ತೆ ಅಭಿವೃದ್ಧಿ, ನಿರಂತರ ವಿದ್ಯುತ್‌ ಯೋಜನೆಯ ಕಾಮಗಾರಿಯನ್ನು ಗ್ರಾಮಸ್ಥರ ಮನವಿ ಮೇರೆಗೆ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್‌ ಅವರನ್ನು ನಾಯಕ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು. ಎಪಿಎಂಸಿ ನಿರ್ದೇಶಕರಾದ ಸಿದ್ದಲಿಂಗಮ್ಮ, ಎಚ್‌.ಸಿ.ಕೃಷ್ಣೇಗೌಡ, ವೀರಣ್ಣಯ್ಯ, ಚನ್ನಂಗೆರೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಕೆ.ಜಗದೀಶ್‌, ತಾಪಂ ಸದಸ್ಯೆ ಸುನೀತಾ, ಚನ್ನಂಗೆರೆ ಗ್ರಾಪಂ ಮಾಜಿ ಅಧ್ಯಕ್ಷರಾದ ನಾರಾಯಣಗೌಡ, ಸುಕನ್ಯ, ಸದಸ್ಯರಾದ ಬಸವರಾಜು, ಮಂಜುನಾಥ್‌, ಮಲ್ಲಿಕಾರ್ಜುನ, ಮಾಜಿ ಸದಸ್ಯ ನಟರಾಜು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next