Advertisement

ಜೀವನದ ಪಾಠಕ್ಕೆ ಆದ್ಯತೆ ನೀಡಿ: ನಾದಮಣಿ

03:38 PM Sep 28, 2018 | Team Udayavani |

ಹಗರಿಬೊಮ್ಮನಹಳ್ಳಿ: “ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ, ಮುಟ್ಟಲ್ಲವೇ ನಮ್ಮ ಹುಟ್ಟು, ಮುಟ್ಟಲ್ಲವೇ ನಮ್ಮ ಸೃಷ್ಟಿಯ ಹುಟ್ಟು’ ಎಂದು ದೋತಾರಿ ಹಿಡಿದು ನಾದಮಣಿ ನಾಲ್ಕೂರು ಹಾಡಿದ ಗೀತೆಯನ್ನು ಶಾಲಾ, ಕಾಲೇಜು ಮಕ್ಕಳು ಕಣ್ಮುಚ್ಚಿ ವಿಜ್ಞಾನಿಗಳಂತೆ ಆಲಿಸಿದರು. ತಾಲೂಕಿನ ತಂಬ್ರಹಳ್ಳಿಯ ಕಿನ್ನಾಳ್‌ ಪೋರಮಾಂಬೆ ಗುರುಸಿದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ವಿವೇಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ತತ್ವಪದಗಳ ಕಾರ್ಯಕ್ರಮದಲ್ಲಿ ನಾಲ್ಕೂರು ಅವರ ಗೀತೆಗಳು ವಿಶೇಷ ಗಮನ ಸೆಳೆದವು.

Advertisement

ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಮನೋಭಾವ ತಳೆಯಬೇಕು. ಪ್ರಜ್ಞಾವಂತರೇ ಅಸ್ಪೃಶ್ಯತೆ ಜಾರಿ ಮಾಡುತ್ತಿರುವುದನ್ನು ಟೀಕಿಸಿದರು. ಹೆಣ್ಣನ್ನು ವಿಜ್ಞಾನದ ನೋಟದಿಂದ ನೋಡಬೇಕು ಎಂದು ಹಾಡಿನಲ್ಲಿ ಅರ್ಥೈಸಿದರು. ಜಿ.ಎಸ್‌.ಶಿವರುದ್ರಪ್ಪನವರ ಹೂವಿನ ದಳಗಳ ತುಂಬ ಅಮ್ಮಾ ಯಾಕಾ ಇಷ್ಟೊಂದು ದೂಳು ಎಂಬುವ ಗೀತೆ ಪರಿಸರ, ನೀರಿನ ಮೂಲ ಸಂರಕ್ಷಣೆ ಬಗ್ಗೆ ಕಟ್ಟಿಕೊಟ್ಟಿತು. ಜಲ ಮರುಪೂರಣ ಆಗಬೇಕು. ನೀರಿನ ಸೆಲೆಗಳನ್ನು ಉಳಿಸಬೇಕು ಎಂದು ಹೇಳಿದರು. 

ಮೂಡ್ನಕೂಡು ಚಿನ್ನಸ್ವಾಮಿಯವರ ನಮ್ಮ ಎಲುಬಿನ ಹಂದರದೊಳಗ ಮಂದಿರವಿದೆ, ಇಗರ್ಜಿ ಇದೆ ಎಂಬುವ ಹಾಡಿಗೆ ವಿದ್ಯಾರ್ಥಿಗಳು ತಲೆದೂಗಿದರು. ಜಾತಿ ಏಣಿಶ್ರೇಣಿ ವ್ಯವಸ್ಥೆಯನ್ನು ಕೈ ಬಿಡಬೇಕು ಎಲ್ಲರ ಒಂದೇ ಎನ್ನುವ ಮನೋಭಾವ ಹೊಂದಬೇಕು. ಅಕ್ಷರ ಕಲಿತದ್ದು ಎದೆಗೆ ಬೀಳಬೇಕು, ನಮ್ಮ ಬದುಕಿಗೆ ಅನ್ವಯ ಮಾಡಿಕೊಳ್ಳಬೇಕು. ಅಕ್ಷರದಿಂದ ಜ್ಞಾನದ ಅರಿವು ಮೂಡುತ್ತದೆ. ಅರಿವು ಮನುಷ್ಯನನ್ನು ಪ್ರಜ್ಞಾವಂತನ್ನಾಗಿ ಮಾಡುತ್ತದೆ. ಇವೆಲ್ಲವುಗಳನ್ನು ನಮ್ಮ ನಡವಳಿಕೆಗಳನ್ನಾಗಿಸಿಕೊಳ್ಳಬೇಕು. ಇಂದಿನವರು ಅಕ್ಕಮಹಾದೇವಿ, ಬಸವಣ್ಣ, ಸೂಫಿ ಸಂತರ ವಚನಗಳನ್ನು ಜೀವನದ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯತೆ ಮೆರೆಯಬೇಕು. ಬದುಕುವ ಹಕ್ಕನ್ನು ನಿರಾಕರಿಸಬಾರದು ಎಂದರು.

ಸಾವು-ನೋವು, ಹೊಡೆದಾಟಗಳು ಅಮಾನವೀಯವಾಗಿವೆ. ಕ್ರೂರತ್ವವನ್ನು ಬಿಟ್ಟು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಭಾವುಕತನ, ಭಾವನೆಗಳಿಗೆ ಸ್ಪಂದನೆ ಸಿಗಬೇಕು. ಕಲಿಕೆಯಲ್ಲಿ ಜೀವನದ ಪಾಠಕ್ಕೆ ಆದ್ಯತೆ ಹೆಚ್ಚಾಗಬೇಕು. ಪ್ರಾಥಮಿಕ ಹಂತದಲ್ಲಿ ಇರುವ ನಲಿಕಲಿ ಪಠ್ಯದ ಮೂಲ ಉದ್ದೇಶ ತಿಳಿಯಬೇಕು ಎಂದರು.

ತತ್ವಪದಗಳನ್ನು, ಕಲಿಕೆಯಲ್ಲಿ ಅಳವಡಿಸಿಕೊಳ್ಳುವ ರೀತಿ ನೀತಿಗಳ, ಪರಿಸರ ಸಂರಕ್ಷಣೆ, ಜಾತಿ ವ್ಯವಸ್ಥೆ ಬಗ್ಗೆ 2 ಗಂಟೆಗಳ ಕಾಲ ನಾದಮಣಿ ನಾಲ್ಕೂರು ಅವರು ಹಾಡಿದ ಗೀತೆಗಳು ಮಕ್ಕಳನ್ನು ಮಂತ್ರಮುಗ್ದರನ್ನಾಗಿಸಿದ್ದವು. ವಿದ್ಯಾರ್ಥಿ ಪ್ರವೀಣ ಮಾನವೀಯತೆ ಮರೆಯಾಗುತ್ತಿರುವುದರ ಬಗ್ಗೆ ಅತ್ಯಂತ ಬೇಸರದಿಂದ ನುಡಿದು ವ್ಯವಸ್ಥೆ ಬದಲಾವಣೆಗೆ ಪಣ ತೊಡಬೇಕು ಎಂದರು.

Advertisement

ಇದೇ ವೇಳೆ ನಾಲ್ಕೂರು ಅವರ ಗೀತೆಗಳ ಅರ್ಥವನ್ನು ವಿದ್ಯಾರ್ಥಿಗಳು ಭಾವಾರ್ಥದೊಂದಿಗೆ ವಿವರಿಸಿ ಮೆಚ್ಚುಗೆಗೆ ಪಾತ್ರರಾದರು. ಜಂಗಮ ಫಕೀರರ ಪಡಸಾಲೆಯ ಪತ್ರೇಶ್‌ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್‌, ಜಿಪಂ ಮಾಜಿ ಸದಸ್ಯ ನಾಗನಗೌಡ್ರು, ಪ್ರಾಂಶುಪಾಲ ಸತೀಶ, ಮುಖ್ಯ ಶಿಕ್ಷಕ ಕೆ.ವಿ.ಲೋಕೇಶ್‌, ವಿವೇಕ ಬಳಗದ ಬಿ.ಶ್ರೀನಿವಾಸ, ಜೆ.ಶಶಿಕಾಂತ, ಟಿ.ವಿಠ್ಠಲ, ಕೊಳ್ಳಿ ಗಿರೀಶ್‌, ಸತೀಶ್‌ಗೌಡ, ಪ್ರೇಮಾನಂದರೆಡ್ಡಿ, ಗ್ರಾಪಂ ಸದಸ್ಯ ಸೊಬಟಿ ಹರೀಶ, ಎಣ್ಣೆ ಬೀಜ ಬೆಳೆಗಾರರ ಸಂಘದ ನಿರ್ದೇಶಕ ಚಮನ್‌ಸಾಬ್‌, ಬಂಡೇ ರಂಗನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಕಡ್ಡಿ ಚನ್ನಬಸಪ್ಪ, ಯುವಕವಿ ಮೈಲಾರ ಮಂಜುನಾಥ್‌ ಇದ್ದರು. ಶಿಕ್ಷಕ ಎಂ.ಎಸ್‌. ಕಲಗುಡಿ, ಕೊಟ್ರಾಗೌಡ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next