ಬೆಂಗಳೂರು: ರಾಜ್ಯ ಸರಕಾರ ಕನ್ನಡಕ್ಕೆ ವಿಶೇಷ ಆದ್ಯತೆ ನೀಡಿದ್ದು, ಎಲ್ಲೆಲ್ಲಿ ಕನ್ನಡವನ್ನು ಪ್ರಧಾನವಾಗಿ ತೆಗೆದುಕೊಂಡು ಬರಲು ಸಾಧ್ಯವೋ, ಅದೆಲ್ಲವನ್ನು ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಅಕಾಡೆಮಿ ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ಗೌರವ ಪ್ರಶಸ್ತಿ 2019-20ನೇ ಸಾಲಿನ ಸಾಹಿತ್ಯಶ್ರೀ ಮತ್ತು 2018-19ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮುಂದಿನ ರಾಜ್ಯೋತ್ಸವವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಮೂಲಕ ಕನ್ನಡ ಸಂಸ್ಕೃತಿ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ಯೋಜನೆ ಗಳನ್ನು ರೂಪಿಸಲಾಗುವುದು ಎಂದರು.
ಭಾಷಾ ಬೆಳವಣಿಗೆ ಕೊರತೆ: ಕಂಬಾರ:
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ನಮ್ಮಲ್ಲೂ ಭಾಷಾ ಬೆಳವಣಿಗೆ ಕೊರತೆಯಿದೆ. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಬೇಕಾದರೆ ಇಂಗ್ಲಿಷ್‌ನಲ್ಲಿ ಯಾವೆಲ್ಲ ಸಾಹಿತ್ಯ ಬಂದಿದೆಯೋ ಅವೆಲ್ಲವೂ ಕನ್ನಡದಲ್ಲಿಯೂ ಸಿಗುವಂತಾಗಬೇಕು ಎಂದರು. “ಕನ್ನಡ ಕವಿಗಳು ಕಂಡ ಭಾರತ’ ಕೃತಿಯನ್ನು ಸಂಸದ ತೇಜಸ್ವಿ ಸೂರ್ಯ ಬಿಡುಗಡೆಗೊಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ವಸಂತಕುಮಾರ್, ರಿಜಿಸ್ಟ್ರಾರ್ ಕರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.