Advertisement

ಮಕ್ಕಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡಿ: ಎಎಸ್‌ಪಿ

01:23 PM Mar 08, 2018 | Team Udayavani |

ಬೀದರ: ಲಿಂಗಾನುಪಾತ ಸುಧಾರಣೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯದಂತೆ ಪೊಲೀಸ್‌ ಇಲಾಖೆ
ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಪೊಲೀಸ್‌ ಇಲಾಖೆ, ಮಕ್ಕಳ ಸಹಾಯವಾಣಿ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಬುಧವಾರ ನಗರದ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಂರಕ್ಷಣೆ ವಿಷಯಗಳ ಕುರಿತು ಪೊಲೀಸ್‌ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಂವೇದನಾಶೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಸಮಾಜದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಅಪರಾಧ ಸಂಖ್ಯೆಗಳು ಹೆಚ್ಚಾಗುತ್ತಿವೆ. ಪ್ರಸಕ್ತ ಅವಿಭಕ್ತ ಕುಟುಂಬಗಳು ಒಡೆಯದಂತೆ ನೋಡಿಕೊಳ್ಳಬೇಕು. ಅವಿಭಕ್ತ ಕುಟುಂಬಗಳಿಂದ ಮಕ್ಕಳಿಗೆ ಸಂಸ್ಕಾರ, ಹಿರಿಯರಿಗೆ ಗೌರವ ಕೊಡುವುದು, ವಿನಯತೆ ದೊರೆಯುತ್ತದೆ ಎಂದರು.
 
 ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಪೊಲೀಸ್‌ ಇಲಾಖೆ, ಮಕ್ಕಳ ಕಲ್ಯಾಣ
ಸಮಿತಿ, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ಇತರೆ ಇಲಾಖೆಗಳು ಸಮನ್ವಯತೆಯಿಂದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಮಾತನಾಡಿ, ಮಕ್ಕಳ ರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯದಂತೆ ಜಾಗೃತಿ ವಹಿಸಬೇಕು. ಈ ಬಗ್ಗೆ ಎಲ್ಲ ಇಲಾಖೆಗಳು ಒಟ್ಟಾಗಿ ಶ್ರಮಿಸಬೇಕು.
 
ಬಾಲ್ಯ ವಿವಾಹ, ಲಿಂಗ ತಾರತಮ್ಯ, ಮಕ್ಕಳ ಹಕ್ಕುಗಳ ಕಾಯ್ದೆಗಳ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಬೇಕು. ಇದರಿಂದ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ, ಮಕ್ಕಳ ಸಾಗಾಣಿಕೆ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳ ನಿಯಂತ್ರಣ ಕಾಯ್ದೆಯಂತಹ ಹಲವಾರು ಕಾನೂನುಗಳು ಜಾರಿಯಲ್ಲಿವೆ. 

Advertisement

ಈ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ ಐ.ಎಸ್‌. ಪಾಂಚಾಳ್‌, ರಕ್ಷಣೆ ಕೋರಿ ಪೊಲೀಸ್‌
ಠಾಣೆಗೆ ಬರುವ ಮಗುವಿನ ಸಮಸ್ಯೆಯನ್ನು ಆತ್ಮೀಯತೆಯಿಂದ ಆಲಿಸಬೇಕು.

ಮಗುವಿನ ಮನಸ್ಸಿಗೆ ಘಾಸಿಯಾಗದಂತೆ ವ್ಯವಹರಿಸಬೇಕು. ಬಾಲಪರಾಧಿ ಎನ್ನುವ ಪದ ಬಳಕೆ ಮಾಡುವಂತಿಲ್ಲ. ಅಂತಹ ಮಕ್ಕಳನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳೆಂದು ಸಂಬೋಧಿಸಬೇಕು. ಮಾಧ್ಯಮಗಳಲ್ಲಿ ಮಕ್ಕಳ ಭಾವಚಿತ್ರ, ವಿಳಾಸ ಬಿತ್ತರಿಸುವ ಮುನ್ನ ಎಚ್ಚರ ವಹಿಸಬೇಕು ಎಂದರು.

ಸಮಿತಿ ಸದಸ್ಯರಾದ ರಜಿಯಾ ಬಳಬಟ್ಟಿ, ಫಾ. ಸ್ಟೀವನ್‌ ಎಲ್‌, ಮಂಜುಳಾ ಎಂ, ಧನಲಕ್ಷ್ಮೀ ಪಾಟೀಲ, ಬಾಲ ನ್ಯಾಯ
ಮಂಡಳಿ ಸದಸ್ಯೆ ಧನವಂತಿ, ಮಕ್ಕಳ ಸಹಾಯವಾಣಿ ನಿರ್ದೇಶಕ ಫಾ| ಸಿ.ಎಲ್‌. ವರ್ಗೀಸ್‌, ಆರ್ಬಿಟ್‌ ಸಂಸ್ಥೆಯ ನಿರ್ದೇಶಕ ಫಾ| ಅನಿಲ್‌ ಸೇರಿದಂತೆ ಪೊಲೀಸ್‌ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಪ್ರಮುಖರು, ಮಕ್ಕಳ ಸಹಾಯವಾಣಿ, ಸ್ವಯಂ ಸೇವಾ ಸಂಸ್ಥೆಗಳು ಪ್ರತಿನಿಧಿಗಳು ಇದ್ದರು. ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪೂರೆ ನಿರೂಪಿಸಿದರು. ರವಿರಾಜ ಭಮ್ಮಶೆಟ್ಟಿ ಸ್ವಾಗತಿಸಿದರು. ಮೇರಿ ಮನೋಹರ ವಂದಿಸಿದರು.

ಬಾಲ್ಯ ವಿವಾಹ ತಡೆಯಿರಿ ಗಡಿ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೆಲವರು ಮಕ್ಕಳ ಪೋಷಕರಿಗೆ ಆಮಿಷ ತೋರಿಸಿ ಬಾಲ್ಯವಿವಾಹ ನಡೆಸುತ್ತಿರುವುದು ಕೇಳಿ ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಮಗುವಿನ ನಾಪತ್ತೆ ಪ್ರಕರಣಗಳು ಬಂದಾಗ ಪೊಲೀಸ್‌ ಅಧಿಕಾರಿಗಳು ಕೂಡಲೇ ಮಗುವಿನ ರಕ್ಷಣೆಗೆ ಮುಂದಾಗಬೇಕು. 
 ಶ್ರೀಹರಿಬಾಬು, ಎಎಸ್‌ಪಿ, ಬೀದರ

Advertisement

Udayavani is now on Telegram. Click here to join our channel and stay updated with the latest news.

Next