ಧಾರವಾಡ: ರಾಜ್ಯದ ಕಾರಾಗೃಹಗಳ ಸುಧಾರಣೆ ನಿಟ್ಟಿನಲ್ಲಿ ಅಗತ್ಯವಿರುವ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಮೊದಲ ಹೆಜ್ಜೆಯಾಗಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ ಎನ್.ಎಸ್. ಮೇಘರಿಖ್ ಹೇಳಿದರು.
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಹಾಗೂ ಕರ್ನಾಟಕ ಕಾರಾಗೃಹ ಇಲಾಖೆ ಆಯೋಜಿಸಿದ್ದ 21ನೇ ತಂಡದ ಹಾಗೂ ಒಂದನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕಾರಾಗೃಹ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅಭ್ಯರ್ಥಿಗಳು ಸಂದರ್ಭ ನಿಭಾಯಿಸುವ ಮತ್ತು ಜೈಲು ನಿರ್ವಹಣೆ ಆಡಳಿತ ಕಲೆ ತಿಳಿದಿರಬೇಕು. ಇಲಾಖೆಗೆ ಶಿಸ್ತು ಮುಖ್ಯ. ಪ್ರತಿ ಸಿಬ್ಬಂದಿ ಮತ್ತು ಜೈಲು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಬುನಾದಿ ತರಬೇತಿಯಲ್ಲಿ ನೀಡಿದ ವಿವಿಧ ವಿಷಯಗಳ ಜ್ಞಾನಅಳವಡಿಸಿಕೊಂಡು ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರೀಕ್ಷಕರಾದ ಎಚ್.ಎಸ್. ರೇವಣ್ಣ ಮಾತನಾಡಿ, ಕಾರಾಗೃಹ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಾತಿ ಸೇರಿದಂತೆ ಎಲ್ಲ ಕಾರ್ಯಗಳಲ್ಲು ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. 1.30 ಲಕ್ಷ ವೆಚ್ಚದಲ್ಲಿ ಬಂಧಿಖಾನೆಗಳಿಗೆ ಸುರಕ್ಷತಾ ತಾಂತ್ರಿಕತೆ ಅಳವಡಿಸಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಇನ್ನೂ ಎರಡು ಪ್ರತ್ಯೇಕ ಬಂಧಿಖಾನೆಗಳನ್ನು ಕಟ್ಟಲಾಗುತ್ತಿದೆ ಎಂದು ಹೇಳಿದರು.
5 ಹೊಸ ಬಂಧಿಖಾನೆ: ರಾಜ್ಯ ಸರಕಾರ ಪ್ರಸಕ್ತ ಸಾಲಿಗೆ ಮತ್ತು 5 ಹೊಸ ಬಂಧಿಖಾನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಬಂಧಿಖಾನೆಗಳಲ್ಲಿರುವ ಕೈದಿಗಳ ಮಾನಸಿಕ ವಿಕಸನಕ್ಕೆ ಆದ್ಯತೆ ನೀಡಿ ಸುಧಾರಣಾ ಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ರೇವಣ್ಣ ತಿಳಿಸಿದರು.
ಎಸ್ಪಿ ಸಂಗೀತಾ ಜಿ. ಸ್ವಾಗತಿಸಿದರು. ಪರೇಡ್ ಕಮಾಂಡರ್ ಡಿಎಆರ್‌ನ ಡಿಎಸ್‌ಪಿ ಹರೀಶಚಂದ್ರ ನಾಯ್ಕ, ಡಿಎಆರ್‌ನ ಆರ್‌ಎಸ್‌ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪರೇಡ್ ಮೂಲಕ ಗೌರವ ವಂದನೆ ಸಲ್ಲಿಸಿದರು. ಧಾರವಾಡ ಹಾಗೂ ಗದಗ ಪೊಲೀಸ್ ವಾದ್ಯ ಮೇಳದ ಕಮಾಂಡರ್ ಐ.ಸಿ. ಡಿಸೋಜಾ ಹಾಗೂ ಜಿ.ಕೆ. ಖಾಜಿ ನೇತೃತ್ವದಲ್ಲಿ ಪೊಲೀಸ್ ವಾದ್ಯ ಮೇಳ ತಂಡದ ಸದಸ್ಯರು ವಾದ್ಯ ನುಡಿಸಿದರು.
ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಮತ್ತು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಇದ್ದರು. ಮಾಯಾ ರಾಮನ್ ಮತ್ತು ಡಾ|ಎ.ಸಿ. ಅಲ್ಲಯ್ಯನಮಠ ನಿರೂಪಿಸಿದರು. ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ| ಅನಿತಾ ಆರ್. ವಂದಿಸಿದರು.