ಧಾರವಾಡ: ಆರ್ಥಿಕವಾಗಿ ಹಿಂದುಳಿದ ಮತ್ತು ನ್ಯಾಯದಾನದ ಅಗತ್ಯವಿರುವ ಎಲ್ಲಾ ಅರ್ಹರಿಗೂ ಗುಣಮಟ್ಟದ ನ್ಯಾಯದಾನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ಜಿಲ್ಲಾಡಳಿತ, ಧಾರವಾಡ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಆಜಾದಿ
ಕಾ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ದಿನಾಚರಣೆ ಅಂಗವಾಗಿ ವಕೀಲರ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಮತ್ತು ನೆರವಿನ ನಿರೀಕ್ಷೆಯಲ್ಲಿರುವ ಎಲ್ಲರೂ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಬಹುದು. ಜಿಲ್ಲಾಡಳಿತವು ಸಂಪೂರ್ಣ ಸಹಕಾರ ನೀಡುವ ಮೂಲಕ ನ್ಯಾಯಾಂಗದ ಆಶಯಗಳನ್ನು ಅನುಷ್ಠಾನಗೊಳಿಸಲು ಮತ್ತು ಉದ್ದೇಶಗಳನ್ನು ಈಡೇರಿಸಲು ಶ್ರಮಿಸಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು ಮತ್ತು ನೆರವು ನಿರಂತರವಾಗಿರುತ್ತದೆ. ಈ ಕುರಿತ ಕಾರ್ಯಚಟುವಟಿಕೆಗಳು ವರ್ಷಪೂರ್ತಿ ಜಾರಿಯಲ್ಲಿರುತ್ತವೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಎಂ. ಅಡಿಗ ಪ್ರಾಸ್ತಾವಿಕ ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕಳೆದ ಅ. 2ರಿಂದ ನ.14ರ ವರೆಗೆ ನಿರಂತರವಾಗಿ 45 ದಿನಗಳ ಕಾಲ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಕನಿಷ್ಟ 3 ಕಾನೂನು ತಿಳಿವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಸುಮಾರು 600 ಜಾಗೃತಿ ಕಾರ್ಯಕ್ರಮಗಳನ್ನು, ಮೂರು ವೆಬಿನಾರ್‌ಗಳನ್ನು ಮತ್ತು ಆರು ಜಾಥಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.
ಕರ್ನಾಟಕ ವಕೀಲರ ಪರಿಷತ್ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ವಿ.ಡಿ. ಕಾಮರೆಡ್ಡಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ. ಪುಷ್ಪಲತಾ, ಡಿಸಿಪಿ ಆರ್.ಬಿ. ಬಸರಗಿ, ಜಿಲ್ಲಾ ಆರೋಗ್ಯ ಅಧಿ ಕಾರಿ ಡಾ|ಯಶವಂತ ಮದೀನಕರ ಇದ್ದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಗೋಡಸೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಎಸ್. ನಾಗಶ್ರೀ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಎನ್.ಆರ್. ಮಟ್ಟಿ ವಂದಿಸಿದರು. ನ್ಯಾಯವಾದಿ ಸೋಮಶೇಖರ ಜಾಡರ ನಿರೂಪಿಸಿದರು.
ಜಿಲ್ಲಾ ನ್ಯಾಯಾಲಯದ ಮಾರ್ಗದರ್ಶನದಲ್ಲಿ ಕಂದಾಯ ಹಾಗೂ ಇತರ ಇಲಾಖೆಗಳು ಜಿಲ್ಲಾ ಕೇಂದ್ರಸ್ಥಾನ ಮತ್ತು ತಾಲೂಕು ಕೇಂದ್ರಸ್ಥಾನ ಸೇರಿದಂತೆ ಪ್ರತಿ ಗ್ರಾಮದಲ್ಲೂ ಕಾನೂನು ಜಾಗೃತಿಗೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಿವೆ. ಈ ಪ್ರಯತ್ನಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಮುಂದಿನ ದಿನಗಳಲ್ಲಿಯೂ ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕಾನೂನು ಜಾಗೃತಿಯ ಅವಕಾಶ ಕಲ್ಪಿಸಲಾಗುವುದು.
ನಿತೇಶ ಪಾಟೀಲ, ಜಿಲ್ಲಾಧಿಕಾರಿ