ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಎಲ್ಲಾ ಕೆರೆಗಳನ್ನು ತುಂಬಿಸುವುದು ನನ್ನ ಕರ್ತವ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ 39 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ಮಾತೆಂಗಮ್ಮ ದೇವಾಲಯಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ, ಸಮಾಜಕಲ್ಯಾಣ ಇಲಾಖೆಯಿಂದ 28 ಜನ ಅರ್ಹ ಫಲಾನುಭವಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ನ್ಯಾಮತಿ ತಾಲೂಕಿನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಈಗಾಗಲೇ 76 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ಧ ಪಡಿಸಿದ್ದು ಶೀಘ್ರದಲ್ಲಿ ಕಾರ್ಯಾರಂಭ ಆಗಲಿದೆ. ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಸಿಸಿ ರಸ್ತೆ ಮಾಡಿಸಲಾಗಿದೆ. ಧೂಳು ಮುಕ್ತ ಮಾಡಿದ್ದೇನೆ. ಅವಳಿ ತಾಲೂಕಿನ ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಪರ ಕಾಳಜಿ ಹೊಂದಿದ್ದು, ರೈತರಿಗೆ ಅನುಕೂಲವಾಗುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿ ಮಾಡಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂಮಾರಬಹುದು. ಇದರಿಂದ ರೈತರಿಗೆ ಉತ್ತಮ ಲಾಭ ದೊರೆಯಲಿದೆ ಎಂದು ಪ್ರತಿಪಾದಿಸಿದರು.
ಜಿ.ಪಂ ಅಧ್ಯಕ್ಷೆ ದೀಪಾ ಜಗದೀಶ್, ನ್ಯಾಮತಿ ತಾ.ಪಂ ಅಧ್ಯಕ್ಷ ಎಸ್ .ಪಿ.ರವಿಕುಮಾರ್, ಹೊನ್ನಾಳಿ ತಾ.ಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್ ಸೇರಿದಂತೆ ಇದ್ದರು.
ಪ್ರತಿಪಕ್ಷಗಳು ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿಯನ್ನು ಭೂತದ ರೀತಿ ಬಿಂಬಿಸುವ ಕೆಲಸ ಮಾಡುತ್ತಿವೆ. ಈ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ರೈತರು ಇದಕ್ಕೆ ಕಿವಿಗೊಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಪರವಾಗಿದ್ದು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.
-ಎಂ.ಪಿ. ರೇಣುಕಾಚಾರ್ಯ,ಸಿಎಂ ರಾಜಕೀಯ ಕಾರ್ಯದರ್ಶಿ