Advertisement

ಸ್ವಚ್ಛ ಬೆಂಗಳೂರು ಸರ್ಕಾರದ ಆದ್ಯತೆ: ಸಿಎಂ

01:32 AM Sep 07, 2019 | Lakshmi GovindaRaju |

ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಕುರಿತಂತೆ ನಗರದ ಬಿಜೆಪಿ ಸಂಸದರು ಹಾಗೂ ಶಾಸಕರ ಜತೆ ಸಭೆ ನಡೆಸಿದ ಅವರು, ಬೆಂಗಳೂರು ನಗರವನ್ನು ಸ್ವಚ್ಛವಾಗಿಡುವುದು ಸರ್ಕಾರದ ಆದ್ಯತೆಯಾಗಿದ್ದು, ಕಸ ವಿಲೇವಾರಿಗೆ ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

Advertisement

ಬೆಂಗಳೂರಿನ ರಸ್ತೆ, ಉದ್ಯಾನವನಗಳು ಸ್ವಚ್ಛವಾಗಿಡಲು 24 ಗಂಟೆಗಳ ಕಾಲ ಕೆಲಸ ಮಾಡಲು ಪೌರಕಾರ್ಮಿಕರನ್ನು ನೇಮಿಸುವ ಅಗತ್ಯವಿದೆ. ರಸ್ತೆಗಳಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸ್ಥಳೀಯ ಸಮಿತಿ ರಚಿಸಿ, ಮಾಸಿಕ ಸಭೆ ಮಾಡಬೇಕು.

ಈ ಸಭೆಯಲ್ಲಿ ಆಯಾ ಪ್ರದೇಶದ ಅಭಿವೃದ್ಧಿ ಕುರಿತು ಚರ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಂಟು ವಲಯಗಳಿಗೆ ನಾಲ್ಕು ವಿಶೇಷ ಆಯುಕ್ತರನ್ನು ಹೆಚ್ಚಿನ ಅಧಿಕಾರ ನೀಡಿ ನೇಮಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಗಳನ್ನು ಒದಗಿಸಲು ಬೆಂಗಳೂರು ಸಹಾಯವಾಣಿ ಸ್ಥಾಪನೆ ಹಾಗೂ ಕಸ ವಿಲೇವಾರಿಗೆ ಪರಿಹಾರ ಕಲ್ಪಿಸಲು ಬೆಂಗಳೂರಿನಲ್ಲಿ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲು ಸೂಚಿಸಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲಿಕೆ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ, ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅಧಿಕಾರಿಗಳು ವಾರ್ಡ್‌ವಾರು ಜನ ಸಂಪರ್ಕ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರತಿ 15 ದಿನಗಳಿಗೊಮ್ಮೆ ನಗರದ ಶಾಸಕರ ಜೊತೆ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಮಾತನಾಡಿ, ನಗರದ 8 ವಲಯಗಳಲ್ಲಿ ವಿಶೇಷ ಆಯುಕ್ತರ ನೇಮಕ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಕಸ ವಿಲೇವಾರಿ ಘಟಕಗಳು ಪ್ರತಿ ದಿನ 200 ಟನ್‌ ವಿಲೇವಾರಿ ಮಾಡುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈಗ 3 ಸಾವಿರ ರೂ.ಗೆ ಒಂದು ಟನ್‌ ಗೊಬ್ಬರ ನೀಡಲಾಗುತ್ತಿದೆ. ಅದನ್ನು 1 ಸಾವಿರ ರೂ. ರೈತರಿಗೆ ನೀಡಲು ತೀರ್ಮಾನಿಸಲಾಗಿದೆ. ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದ್ದು, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಇದೇ ವೇಳೆ, ಉಪನಗರ ರೈಲ್ವೆ ಯೋಜನೆ ಅನುಷ್ಠಾನದ ಕುರಿತು ಮೇಲ್ವಿಚಾರಣೆ ನಡೆಸಲು ಸಂಸದ ಪಿ.ಸಿ. ಮೋಹನ್‌ ಅವರಿಗೆ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.  ಸಭೆಯಲ್ಲಿ ಸಂಸದರಾದ ರಾಜೀವ್‌ ಚಂದ್ರಶೇಖರ್‌, ಪಿ.ಸಿ. ಮೋಹನ್‌, ಬಿ.ಬಿ.ಎಂ.ಪಿ ಆಯುಕ್ತರಾದ ಅನಿಲ್ ಕುಮಾರ್‌, ಶಾಸಕ ಎಸ್‌.ಆರ್‌. ವಿಶ್ವನಾಥ್‌, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್‌ ಮತ್ತು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಕಾರ್ಯದರ್ಶಿ ಶಿವಯೋಗಿ ಕಳಸರ್‌ ಹಾಗು ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next