ಯಾದಗಿರಿ: ಕೇಂದ್ರ ಸರ್ಕಾರದ ಕೃಷಿ ಇಲಾಖೆಯು ಕೃಷಿ ಆದಾಯವನ್ನು 2022ರ ವರೆಗೆ ದ್ವಿಗುಣಗೊಳಿಸುವ ಉದ್ದೇಶದಿಂದ ವಿವಿಧ ರಾಜ್ಯಗಳಲ್ಲಿ ಹಲವಾರು ಕೃಷಿ ಪೂರಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.
ಶಹಾಪುರ ತಾಲೂಕಿನ ಬೆನಕನಾಳ ಜೆ. ಗ್ರಾಮದಲ್ಲಿ ಕಿಸಾನ್ ಕಲ್ಯಾಣ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ 25 ಗ್ರಾಮಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕಿಸಾನ ಕಲ್ಯಾಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕೃಷಿ ಹಾಗೂ ಕೃಷಿಯೇತರ ಗ್ರಾಮೀಣ ಆಧಾರಿತ ಉಪ ಕಸುಬುಗಳಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ವಿವಿಧ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು, ಒಟ್ಟು ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ದೇಶದ 115 ಹಿಂದುಳಿದ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ (ಆಸ್ಪಿರೇಶನಲ್) ಜಿಲ್ಲೆಗಳನ್ನಾಗಿ ಆಯ್ಕೆ ಮಾಡಿ ಕಿಸಾನ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳೂ ಈ ಯೋಜನೆಯ ಅನುಷ್ಠಾನಕ್ಕೆ ಆಯ್ಕೆಗೊಂಡಿದ್ದು, ಈ ನಿಟ್ಟಿನಲ್ಲಿ ಜೂನ್ 1ರಿಂದ ಜುಲೈ 31ರ ವರೆಗೆ ವಿವಿಧ ಕೃಷಿ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯ 25 ಗ್ರಾಮಗಳಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಬೀಜ ನಿಗಮ ಹಾಗೂ ಇತರೆ ಕೃಷಿ ಆಧಾರಿತ ಇಲಾಖೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಮಾಹಿತಿಗಳ ವರ್ಗಾವಣೆ ಹಾಗೂ 25 ಗ್ರಾಮಗಳಲ್ಲಿ ತರಬೇತಿ ಕೈಗೊಳ್ಳಲು ಕಾರ್ಯ ಯೋಜನೆಯನ್ನು ರೂಪಿಸಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಹೆಚ್ಚಿಸುವ ಉಪ ಕಸುಬುಗಳಾದ ಜೇನು ಸಾಕಾಣಿಕೆ, ಎರೆಹುಳ ಗೊಬ್ಬರ ತಯಾರಿಕೆ, ಅಣಬೆ ಬೇಸಾಯ, ಕೈ ತೋಟ, ಕುರಿ ಸಾಕಾಣಿಕೆ, ಆಡು ಸಾಕಾಣಿಕೆ, ಮೀನು ಸಾಕಾಣಿಕೆ, ಆಹಾರ ಸಂಸ್ಕರಣೆ ಮುಂತಾದವುಗಳ ಬಗ್ಗೆ ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗುವುದು ಎಂದು ವಿವರಿಸಿದರು.
ಪಶುತಜ್ಞ ಡಾ| ಮಹೇಶ, ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ, ಕೃಷಿ ಅಧಿಕಾರಿಗಳು ಹಾಗೂ ಗ್ರಾಮದ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.