ನರೇಗಲ್ಲ: ರೋಣ ಮತಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಯಾವುದೇ ಲಾಭಪೇಕ್ಷೆ ಇಲ್ಲದೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಕಡಿಮೆ ಪ್ರಮಾಣದ ಅನುದಾನದ ಕಾಮಗಾರಿ ನಿರ್ಲಕ್ಷಿಸದೇ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿಬೇಕು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಅಬ್ಬಿಗೇರಿ ಗ್ರಾಮದಿಂದ ಜಕ್ಕಲಿ-ಹೊಸಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರವಿವಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 1.5 ಲಕ್ಷ ರೂ. ಅನುದಾನದಲ್ಲಿ 2.10, 4.500 ಹಾಗೂ 8.800ರಲ್ಲಿ ಸೇತುವೆ ನಿರ್ಮಾಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗುತ್ತಿಗೆದಾರರು ಸಾರ್ವಜನಿಕರ ವಿಶ್ವಾಸಗಳಿಸುವಂತಹ ಗುಣಮಟ್ಟ ಕಾಮಗಾರಿ ಕೈಗೊಳ್ಳಬೇಕು. ಒಂದು ವೇಳೆ ಜನರ ಹಿತಕ್ಕೆ ಧಕ್ಕೆಯಾಗುವಂತಹ ಕಾಮಗಾರಿ ಕೈಗೊಂಡರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಮೀನುಗಳಿಗೆ ಮಳೆಗಾಲದಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಅನೇಕ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ರಸ್ತೆ, ಸೇತುವೆ ಅಭಿವೃದ್ಧಿಗೆ ಅನುದಾನ ತರುವ ಕೆಲಸ ನನ್ನಿಂದ ನಡೆಯುತ್ತದೆ. ಆದರೆ, ಕಾಮಗಾರಿ ಗುಣಮಟ್ಟ ಪರೀಕ್ಷಿಸಲು ಗ್ರಾಮಸ್ಥರು ಮುಂದಾಗಬೇಕು. ಕಾಮಗಾರಿ ಕಳಪೆಯಾದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ರೋಣ ಮತಕ್ಷೇತ್ರ ವಿಶಾಲ ವ್ಯಾಪ್ತಿ ಹೊಂದಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವ ದಿಸೆಯಲ್ಲಿ ಈಗಾಗಲೇ ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗಿದೆ. ಕ್ಷೇತ್ರದ ಜನರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಸರ್ಕಾರದ ಲಭ್ಯ ಅನುದಾನ ಒದಗಿಸಿಕೊಂಡು ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಲು ಮೊದಲ ಆದ್ಯತೆ ನೀಡಲಾಗುವುದು. ಕ್ಷೇತ್ರದ ಭಾಗದಲ್ಲಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದ ನೆರವಿನಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಜನರ ಅನುಕೂಲಕ್ಕಾಗಿ ತರುವ ಪ್ರತಿಯೊಂದು ಯೋಜನೆಗಳನ್ನು ಇಲ್ಲಿನ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕಳಕಪ್ಪ ಬಿಲ್ಲ ಮಾತನಾಡಿ, ಗ್ರಾಮದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ಗ್ರಾಮಕ್ಕೆ ಸೇತುವೆ ಅವಶ್ಯವಾಗಿತ್ತು. ಮಳೆ ಬಂದಾಗ ಅನೇಕ ಬಾರಿ ಗ್ರಾಮಸ್ಥರು ಹಳ್ಳ ತುಂಬಿ ಬಂದು ದಂಡೆ ಮೇಲೆ ಇರುವ ಸಂದರ್ಭವಿತ್ತು. ಈಗ ಸಮಸ್ಯೆ ಬಗೆಹರಿಯುತ್ತದೆ. ಅಬ್ಬಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯಲ್ಲಿರುವ ಪ್ರತಿಯೊಂದು ಸೇತುವೆ ಕಾಮಗಾರಿ ಅವಶ್ಯವಾಗಿದೆ. ಗ್ರಾಮದಲ್ಲಿ ಅನೇಕ ಯೋಜನೆ ಜಾರಿಗೊಳಿಸುವ ಮೂಲಕ ಅಬ್ಬಿಗೇರಿಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಕನಸುವಾಗಿದೆ ಎಂದು ಹೇಳಿದರು.
ತಾಪಂ ಸದಸ್ಯೆ ಶಂಕುತಲಾ ನಿಡಗುಂದಿ, ಗ್ರಾಪಂ ಉಪಾಧ್ಯಕ್ಷೆ ದೇವಕ್ಕ ಮಾರೆಪ್ಪನವರ, ಗ್ರಾಪಂ ಸದಸ್ಯ ಸುರೇಶ ನಾಯ್ಕರ, ಸುರೇಶ ಶಿದ್ನೇಕೊಪ್ಪ, ಶರಣಪ್ಪ ಗುಜಮಾಗಡಿ, ಲಕ್ಷ್ಮಣ ಐಹೊಳ್ಳಿ, ಮುತ್ತಕ್ಕ ನಿಡಗುಂದಿ, ಯಲ್ಲಪ್ಪ ಹಿರೇಮನಿ, ಮಹಾದೇವಪ್ಪ ಕಂಬಳಿ, ಶಾರದಾ ಹಡಪದ, ದ್ರಾಕ್ಷಾಣಿವ್ವ ಗುಗ್ಗರಿ, ಸಕ್ರಮ್ಮ ನೀರಲೋಟಿ, ಲೀಲಾವತಿ ಹುಲ್ಲೂರ, ಹನಮವ್ವ ಜಂತ್ಲಿ, ಬಸವರಾಜ ಪಲ್ಲೇದ, ಬಾಬುಗೌಡ ಪಾಟೀಲ, ರವಿ ಯತ್ನಟ್ಟಿ, ಅಪ್ಪಣ್ಣ ಪಾಟೀಲ, ಭರಮಪ್ಪ ಹನಮನಾಳ, ಮೇಲಗಿರಗೌಡ ಚನ್ನಪ್ಪಗೌಡ್ರ, ವಂಕಣ್ಣ ಹಜಾರೆ ಇದ್ದರು.