Advertisement

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

08:30 AM Sep 22, 2019 | Team Udayavani |

ಹುಬ್ಬಳ್ಳಿ: ಮುಂದಿನ 30-40 ವರ್ಷಗಳ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮೂಲಸೌಲಭ್ಯ ಕಲ್ಪಿಸಿಲು ಯೋಜನೆ ರೂಪಿಸಲಾಗಿದೆ. ನಗರದ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿಆರ್‌ ಎಫ್‌ ಯೋಜನೆಯಲ್ಲಿ ಕಾಂಕ್ರೀಟ್‌ರಸ್ತೆ ನಿರ್ಮಾಣ ಮಾಡಲಾಗುವುದು. ಶೀಘ್ರದಲ್ಲಿ ನಗರದ ಪ್ರಮುಖ ನಾಲ್ಕೈದು ರಸ್ತೆಗಳ ನಿರ್ಮಾಣ ಕಾರ್ಯ ಆರಂಭವಾಗಲಿವೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಾನಗರ ಅಭಿವೃದ್ಧಿ ದೃಷ್ಟಿಯಿಂದ ಒಂದು ಫೋರಂ ಮಾಡಿ ಮೂರ್‍ನಾಲ್ಕು ತಿಂಗಳಿಗೊಮ್ಮೆ ಸಭೆ ಮಾಡಿ ಅವಶ್ಯ ಯೋಜನೆಗಳ ಕುರಿತು ಚರ್ಚಿಸುವ ಅಗತ್ಯವಿದೆ. ಮೊದಲು ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿ ಗುರುತಿಸುವ ಕೆಲಸ ಆಗಬೇಕು. ನಂತರ ಇಲ್ಲಿನ ಹೂಡಿಕೆದಾರರ ಸಭೆ ಮಾಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ವಿವಿಧ ಇಲಾಖೆಯಲ್ಲಿ ಮಹಿಳೆಯರಿಗೆ ದೊರೆಯುವ ಯೋಜನೆಗಳ ಮಾಹಿತಿ ಒಂದೇ ಸೂರಿನಡಿ ದೊರೆಯುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈ ಕುರಿತು ಇಲಾಖೆಯ

ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ತೊಡಗುವಿಕೆ ಹೆಚ್ಚಬೇಕಿದೆ. ಅಲ್ಪಾವಧಿಯಲ್ಲಿ ಲಾಭ ಮಾಡುವ ಮನಸ್ಥಿತಿಯಿಂದ ಹೊರಬರಬೇಕಿದೆ ಎಂದು ಹೇಳಿದರು.

Advertisement

ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ವಿನಯ ಜವಳಿ, ರಮೇಶ ಪಾಟೀಲ, ವಸಂತ ಲದ್ವಾ ಇನ್ನಿತರರಿದ್ದರು.

ಸಚಿವರಿಗೆ ಮನವಿ: ಹು-ಧಾ ಮಹಾನಗರ ಉತ್ಪಾದನಾ ವಲಯ, ರಕ್ಷಣಾ ಸಲಕರಣೆಗಳು ಹಾಗೂ ಉತ್ಪನ್ನಗಳಪಾರ್ಕ್‌, ಇಂಡಸ್ಟ್ರಿಯಲ್‌ ಪಾರ್ಕ್‌ ಹಾಗೂ ವಿಶೇಷ ಆರ್ಥಿಕ ವಲಯ, ಮಹಾನಗರದ ಅಭಿವೃದ್ಧಿ, ರಸ್ತೆಗಳ

ಅಗಲೀಕರಣ, ಘನತ್ಯಾಜ್ಯ ನಿರ್ವಹಣೆ, ಟ್ರಕ್‌ ಟರ್ಮಿನಲ್‌, ಮಹಾನಗರದ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಾರಿಗೆ ಸಂಚಾರ ನಿರ್ವಹಣೆ, ಚತುಷ್ಪಥ ರಸ್ತೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next