ಬೆಂಗಳೂರು: ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಸದಸ್ಯರ ಹಾಜರಾತಿ ಹಾಗೂ ಪ್ರಮುಖ ವಿಷಯಗಳ ಚರ್ಚೆ ಸಂದರ್ಭದಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳುವ ವಿಚಾರದಲ್ಲಿ ನಾನು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಚರ್ಚೆ ಇಲ್ಲದೆ ವಿಧೇಯಕಗಳ ಅನುಮೋದನೆ ಒಳ್ಳೆಯ ಪ್ರವೃತ್ತಿಯಲ್ಲ. ವಿಧೆಯಕದ ಬಗ್ಗೆ ಕನಿಷ್ಠ ಇಂತಿಷ್ಟು ಸದಸ್ಯರು ಮಾತನಾಡಬೇಕು. ಸಮಗ್ರವಾಗಿ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಜತೆಯೂ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಜತೆ ಅನೌಪಚಾರಿಕವಾಗಿ ಮಾತನಾಡಿ, ಸದನದಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಬೇಕು ಹಾಗೂ ಸಮಸ್ಯೆಗಳಿಗೆ ಪರಿಹಾರವೂ ದೊರಕುವಂತಾಗಬೇಕು. ಸದಸ್ಯರು ತಮ್ಮ ಕ್ಷೇತ್ರಗಳಷ್ಟೇ ಅಲ್ಲದೆ ರಾಜ್ಯದ ಸಮಸ್ಯೆಗಳ ಬಗ್ಗೆಯೂ ಸದನದಲ್ಲಿ ಪ್ರಸ್ತಾಪವಾದಾಗ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ವಿಧಾನಸಭೆ ಸಚಿವಾಲಯ ಕಾಗದ ರಹಿತ ಮಾಡುವ ನಿಟ್ಟಿನಲ್ಲಿ ಇ-ವಿಧಾನ್ ಪದ್ಧತಿ ಜಾರಿಗೊಳಿಸಲಾಗುವುದು. ಇ-ವಿಧಾನ್ ಅಳವಡಿಕೆ ಸಂಬಂಧ ಈಗಾಗಲೇ ತೀರ್ಮಾನವಾಗಿದೆ. ಸದಸ್ಯರ ಪ್ರಶ್ನೋತ್ತರ ಆನ್‌ಲೈನ್‌ನಲ್ಲೇ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಬರ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ವಿದೇಶ ಪ್ರವಾಸ ಸೇರಿ ಅನಗತ್ಯ ಪ್ರವಾಸಗಳಿಗೆ ಅವಕಾಶ ಕೊಡದಿರಲು ಸ್ಪೀಕರ್ ತೀರ್ಮಾನಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಾಸಕರು ವಿದೇಶ ಪ್ರವಾಸ ಕೈಗೊಂಡಿಲ್ಲ. ಸದ್ಯಕ್ಕೆ ವಿದೇಶ ಪ್ರವಾಸಕ್ಕೆ ಅನುಮತಿಯೂ ನೀಡದಿರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.