ನೆಲಮಂಗಲ: ಕ್ಷೇತ್ರದಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ನನ್ನ ಆದ್ಯತೆಯಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಶಾಸಕ ಎನ್. ಶ್ರೀನಿವಾಸ್ ಭರವಸೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ 2022-23ನೇ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ನಾನು ಕೂಡ ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದಿ ಇಂದು ಶಾಸಕನಾಗಿದ್ದೇನೆ. ನಮ್ಮ ಕ್ಷೇತ್ರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಪರೀಕ್ಷೆಗೆ ಒತ್ತು ನೀಡಿ: ಸರ್ಕಾರಿ ಶಾಲಾ-ಕಾಲೇಜಿನ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಪದವಿ ಶಿಕ್ಷಣದ ನಂತರ ಸ್ನಾತಕೋತ್ತರ ಶಿಕ್ಷಣ ಪಡೆ ಯುವ ಜತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಒತ್ತು ನೀಡಿ, ಕಲಾ ವಿಭಾಗದ ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಮುಂ ದಿನ ದಿನದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಪದವಿ ಶಿಕ್ಷಣದ ಜತೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿ ದರೆ ಯಶಸ್ವಿ ಜೀವನ ಸಾಗಿಸಬಹುದು ಎಂದರು.
ಅಭಿವೃದ್ಧಿಯ ಭರವಸೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ನಾಗಭೂಷಣಯ್ಯ ಮಾತನಾಡಿ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದು, ಅವರಿಗೆ ಅಭಿನಂದಿಸುವ ಕೆಲಸವನ್ನು ಮಾಡಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭಕ್ಕೆ ಶಾಸಕರು ಆಗಮಿಸಿ ವಿದ್ಯಾರ್ಥಿಗಳಿಗೆ ಸಲಹೆ, ಸೂಚನೆ ನೀಡುವ ಮೂಲಕ ಅಭಿವೃದ್ಧಿಯ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದರು.
ಸಾಧನೆ ಪರಿಚಯ: ಸಾಧಕ ವಿದ್ಯಾರ್ಥಿಗಳಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಮರು ಮಾನ್ಯತೆಯಲ್ಲಿ ಬಿ ಪ್ಲಸ್ ಶ್ರೇಣಿ ಲಭ್ಯವಾಗಿದ್ದು, ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾಧನೆ ಮಾಡಿದ್ದು, ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವ ಬಗ್ಗೆ ಪ್ರಾಧ್ಯಾಪಕರಾದ ಡಾ.ಪ್ರಮೀಳಾ, ಡಾ.ಅಂಜನಕುಮಾರ್, ಪ್ರೊ. ಚಂದ್ರಶೇಖರ್ ಸಾಧನೆ ಪರಿಚಯ ಮಾಡಿಕೊಟ್ಟರು.
ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್, ಉಪಾಧ್ಯಕ್ಷೆ ಸುಜಾತಾಮನಿಯಪ್ಪ, ಸದಸ್ಯರಾದ ಪ್ರದೀಪ್, ಸುಧಾಕೃಷ್ಣಪ್ಪ, ಲೋಲಾಕ್ಷಿ ಗಂಗಾಧರ್, ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಹಿರಿಯ ವಕೀಲ ಹನುಮಂತೇಗೌಡ, ಮುಖಂಡ ಸಿಎಂ ಗೌಡ್ರು, ಹುಚ್ಚಹನುಮೇಗೌಡ,ಚಿಕ್ಕಣ್ಣ, ಪುರುಷೋತ್ತಮ್, ಅರ್ಜುನ್, ಲಕ್ಷ್ಮೀನಾರಾ ಯಣ್, ವಿಜಯ್‌ಕುಮಾರ್, ಐಕ್ಯೂಎಸಿ ಸಂಚಾಲಕ ಡಾ.ತೋಪೇಶ್ ಎಚ್., ಪ್ರೊ. ಮಂಜಪ್ಪ, ಪ್ರೊ. ಹನುಮಂತರಾಜು, ಪ್ರೊ. ಗಾಯಿತ್ರಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಮತ್ತಿತರರಿದ್ದರು.
ಅನುದಾನದ ಭರವಸೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ 5ರಿಂದ 10ಕೋಟಿ ಅನುದಾನವನ್ನು ಸರ್ಕಾರದಿಂದ ಮುಂಜೂರು ಮಾಡಿಸುವ ಭರವಸೆಯನ್ನು ಶಾಸಕ ಎನ್.ಶ್ರೀನಿವಾಸ್ ನೀಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.