ಕೈಕಂಬ: ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿವೆ. ಈಗಾಗಲೇ ಸುಮಾರು 22 ಕಿ.ಮೀ.ಗಳಷ್ಟು ರಸ್ತೆ¤ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಬಹು ವರ್ಷಗಳ ಬೇಡಿಕೆಯ ರಸ್ತೆ ಇದಾಗಿದ್ದು, ಸುಮಾರು 1,200 ಕೋ. ರೂ.ಯ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿ ದರು.
ಬೇರೆ ಬೇರೆ ಕಾರಣ ಹಾಗೂ ಕೆಲವು ಕಡೆ ಕಾನೂನುನಾತ್ಮಕ ಕಾರಣಗಳಿಂದ ಕಾಮಗಾರಿಗಳು ನಡೆಯುತ್ತಿಲ್ಲ. ಆ ಸಮಸ್ಯೆಗಳನ್ನು ಪರಿಹಾರ ಮಾಡಿ ರಾ.ಹೆ. ಕಾಮಗಾರಿ 2024ಕ್ಕೆ ಪೂರ್ಣಗೊಳ್ಳುವಂತೆ ಆದ್ಯತೆ ನೀಡಲಾಗುತ್ತದೆ. ಅನುಭವಿ ತಂಡ ಈ ಕಾಮಗಾರಿಯನ್ನು ಮಾಡುತ್ತಾ ಇದೆ. ಕಾಮಗಾರಿಗೆ ವೇಗ ಕೊಡುವ ದೃಷ್ಟಿಯಿಂದ ನಾನು ಮತ್ತು ಶಾಸಕ ಡಾ| ಭರತ್ ಶೆಟ್ಟಿ ಅವರು ಭೇಟಿ ನೀಡಿ,ಇಲ್ಲಿನ ಜನರ ಸಮಸ್ಯೆಗಳನ್ನು ಹಾಗೂ ಮಳೆಗಾಲ ಬರುವುದರಿಂದ ಚರಂಡಿ ವ್ಯವಸ್ಥೆ, ನೀರಿನ ಸಮಸ್ಯೆ ಹಾಗೂ ಇತರ ಸಮಸ್ಯೆಗಳನ್ನು ನಾವು ಪರಿಶೀಲನೆ ಮಾಡಲಾಗಿದೆ. ಸಮಸ್ಯೆಗಳಿರುವ ಪ್ರದೇಶಗಳಲ್ಲಿ ಬೇಗ ಸರಿಪಡಿಸಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶವನ್ನು ನೀಡಲಾಗಿದೆ.
ಕಳೆದ 9 ವರ್ಷಗಳಿಂದ ಜಿಲ್ಲೆಗೆ ಅನುದಾನಗಳ ಮಹಾಪೂರವೇ ಹರಿದು ಬಂದಿದೆ. ಸರಕಾರ ಬೇರೆ ಬೇರೆ ಯೋಜನೆಯಡಿಯಲ್ಲಿ 38 ಸಾವಿರ ಕೋಟಿ ರೂ. ಕೊಟ್ಟಿದೆ. ರಸ್ತೆ ಕಾಮಗಾರಿಗಳಿಗೆ ಸುಮಾರು 10 ಸಾವಿರ ಕೋಟಿ ರೂ. ಕ್ಕಿಂತ ಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡಿದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ಎರಡು ಟೆಂಡರ್‌ಗಳ ಹಂತದಲ್ಲಿ ಕಾಮಗಾರಿ ನಡೆಯುತ್ತದೆ. ಬಿಸಿರೋಡ್‌ನಿಂದ ಪುಂಜಾಲ್ ಕಟ್ಟೆ, ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಕೊಡಗು ಮಾಣಿ ಡಿಪಿಆರ್ ಹಂತದಲ್ಲಿದೆ. ಸರಕಾರ ಹತ್ತಾರು ರಸ್ತೆಗಳ ಅಭಿವೃದಿಗೆ ಜಿಲ್ಲೆಗೆ ಅನುದಾನ ನೀಡಿದೆ.
ಈ ಸಂದರ್ಭದಲ್ಲಿ ಶಾಸಕ ಡಾ|ಭರತ್ ಶೆಟ್ಟ ವೈ., ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಪಿಡಿಒ ಜಗದೀಶ್, ತಿಲಕ್‌ರಾಜ್, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ರಾಷ್ಟ್ರಿಯ ಹೆದ್ದಾರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲ್ವೇ ಇಲಾಖೆ ಜತೆ ಸಭೆ
ರಾಷ್ಟ್ರೀಯ ಹೆದ್ದಾರಿಯ ಎಲ್ಲ ಕಾಮಗಾರಿಗಳನ್ನು ಹಿಂದಿನಂತೆ 15 ದಿನಕ್ಕೊಮ್ಮೆ ನಾನೇ ಪರಿಶೀಲನೆ ಮುಂದಕ್ಕೆ ಮಾಡುತ್ತೇನೆ. ರೈಲ್ವೇ ಯೋಜನೆಗಳಿಗೆ ಜೂ.9ಕ್ಕೆ ಸಭೆ ಕರೆಯಲಾಗಿದೆ. ಈ ಹಿಂದೆ ಮೂರು ತಿಂಗಳಿಗೊಮ್ಮೆ ಸಭೆ ನಡೆಯುತ್ತಿತ್ತು. ಎಲ್ಲ ರೈಲ್ವೇ ವಿಭಾಗೀಯ ಸಭೆಯನ್ನು ಮಂಗಳೂರಿನಲ್ಲಿ ಕರೆಯಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.