ದುಶಾಂಬೆ/ಹೊಸದಿಲ್ಲಿ: ಚೀನದೊಂದಿಗೆ ಹೊಂದಿಕೊಂಡಿರುವ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಶಾಂತಿ ಸ್ಥಾಪನೆಯೇ ಆದ್ಯತೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಶಾಂಘೈ ಸಹಕಾರ ಒಕ್ಕೂಟದ ಸಭೆಯ ನಂತರ ಚೀನಾ ವಿದೇಶಾಂಗ ಸಚಿವ ವಾಂಗ್ ಇ ಜತೆಗೆ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿದ ವಿದೇಶಾಂಗ ಸಚಿವರು ಎಲ್‌ಎಸಿ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿದ್ದಾಗಿ ಬರೆದುಕೊಂಡಿದ್ದಾರೆ. ಸೌಹಾರ್ದ ಬಾಂಧವ್ಯಕ್ಕೆ ಗಡಿಯಲ್ಲಿ ಶಾಂತಿ ಸ್ಥಾಪಿಸಬೇಕು ಎಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.
ಏಕಾಏಕಿಯಾಗಿ ಅಲ್ಲಿನ ಸ್ಥಿತಿಗತಿಗಳಲ್ಲಿ ಬದಲಾವಣೆ ಮಾಡುವುದು ಸಲ್ಲದು ಎಂದು ಸ್ಪಷ್ಟ ಮಾತುಗಳಲ್ಲಿ ಚೀನ ಸಚಿವರಿಗೆ, ಜೈಶಂಕರ್ ಮನವರಿಕೆ ಮಾಡಿದ್ದಾರೆ. ಪ್ಯಾಂಗಾಂಗ್ ಸೋ ಸರೋವರ ಬಳಿಯಿಂದ ಸೇನೆಗಳು ವಾಪಸಾದ ಬಳಿಕ ಮಾತುಕತೆಗೆ ಪೂರಕ ವಾತಾವರಣ ಉಂಟಾಗಿದೆ ಎಂದರು.
ಸಮಿತಿ ಸಭೆಯಲ್ಲಿ ಗದ್ದಲ: ಮತ್ತೂಂದೆಡೆ, ರಕ್ಷಣಾ ವಿಚಾರಗಳಿಗಾಗಿನ ಸಂಸತ್‌ನ ಸ್ಥಾಯಿ ಸಮಿತಿಯಿಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಸಂಸದರು ಹೊರನಡೆದಿದ್ದಾರೆ. ಎಲ್‌ಎಸಿ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿ ಅದ್ಯಕ್ಷ ಬಿಜೆಪಿಯ ಜುವಲ್ ಒರಾಂ, ಸಭೆಯ ಅಜೆಂಡಾದಲ್ಲಿ ವಿಚಾರ ಇಲ್ಲದ್ದರಿಂದ ಅದಕ್ಕೆ ಅನುಮತಿ ನೀಡಲಾಗದು ಎಂದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನಡುವೆ ವಾಗ್ವಾದ ಉಂಟಾಯಿತು. ಅಂತಿಮವಾಗಿ ರಾಹುಲ್ ಮತ್ತು ಕಾಂಗ್ರೆಸ್‌ನ ಇತರ ಸಂಸದರು ಸಭೆಯಿಂದ ಹೊರನಡೆದರು.