Advertisement

ಹೊಸ ಶಿಕ್ಷಣ ನೀತಿಯಲ್ಲಿ ಸ್ವಾಯತ್ತತೆಗೆ ಆದ್ಯತೆ

09:19 AM Jul 19, 2019 | Suhan S |

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ನಿಯಮಾವಳಿ ಪ್ರಕಾರ ಕಾಲೇಜುಗಳು ಪಠ್ಯಕ್ರಮ ರೂಪಿಸುವ ಹಾಗೂ ಪರೀಕ್ಷೆ ನಡೆಸುವ ಅಧಿಕಾರ ಹೊಂದಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಕರ್ನಾಟಕ ಜ್ಞಾನ ಆಯೋಗ ಮಾಜಿ ಕಾರ್ಯದರ್ಶಿ ಪ್ರೊ| ಎಂ.ಕೆ. ಶ್ರೀಧರ ಹೇಳಿದರು.

Advertisement

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಶಿಕ್ಷಣ ಕರಡು ನೀತಿ-2019ರ ಕುರಿತು ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಅನ್ವಯ ಕಾಲೇಜುಗಳನ್ನು ವಿಶ್ವವಿದ್ಯಾಲಯಗಳಿಂದ ಬೇರ್ಪಡಿಸಿ ಸ್ವಾಯತ್ತತೆ ನೀಡಬೇಕು. ಕಾಲೇಜುಗಳ ಕೇವಲ ಆಡಳಿತಾತ್ಮಕ ವಿಷಯಗಳನ್ನು ಮಾತ್ರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಪ್ಪಿಸಬೇಕು. ಇನ್ನುಳಿದಂತೆ ಪಠ್ಯಕ್ರಮ ಹಾಗೂ ಪರೀಕ್ಷೆಗಳನ್ನು ಕಾಲೇಜಿನ ಅಧೀನದಲ್ಲಿಯೇ ನಡೆಯುವಂತಾಗಬೇಕು. ಹೊಸ ಪಠ್ಯ ನೀತಿಯಲ್ಲಿ ಅಡಕವಾಗಿರುವ ಅಂಶಗಳು ಉನ್ನತ ಶಿಕ್ಷಣದ ಪ್ರಗತಿಗೆ ಪೂರಕವಾಗಿರುವಂಥವು ಎಂದು ವಿವರಿಸಿದರು.

ಈಗಾಗಲೇ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿರುವ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳನ್ನು ತೆಗೆದು ಹಾಕಿ ಉದಾರತೆ ಮೆರೆಯಬೇಕೆಂಬ ನಿಯಮ ಹೊಸ ನೀತಿಯಲ್ಲಿದೆ. ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿದ್ದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಇತಿಹಾಸ, ರಸಾಯನ ಶಾಸ್ತ್ರ, ಲೆಕ್ಕಶಾಸ್ತ್ರ ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಇದೇ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುವಂತೆ ನಿರ್ಬಂಧ ಹೇರಬಾರದು. ಉದಾರತೆಯಿಂದ ವಿಷಯಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದರು.

ಕಾಲೇಜುಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವ ತೆಗೆದುಕೊಳ್ಳಬಹುದಾಗಿದೆ. ಖಾಸಗಿ ಸಹಭಾಗಿತ್ವದಿಂದಾಗಿ ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬಹುದಾಗಿದೆ ಎಂಬುದು ಹೊಸ ಶಿಕ್ಷಣ ನೀತಿಯಲ್ಲಿ ಅಡಕವಾಗಿದೆ ಎಂದು ಪ್ರೊ| ಎಂ.ಕೆ. ಶ್ರೀಧರ ಅವರು ವಿಷಯ ಮಂಡಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಈ ವಿಷಯ ಕುರಿತು ಸುದೀರ್ಘ‌ವಾಗಿ ಚರ್ಚೆ ನಡೆಸಿದರು.

Advertisement

ಖಾಸಗಿ ಸಹಭಾಗಿತ್ವದಿಂದಾಗಿ ಕಾಲೇಜುಗಳ ಮೇಲಿನ ಹಿಡಿತ ಸಡಿಲಿಸಿದಂತಾಗುತ್ತದೆ. ಬಂಡವಾಳಶಾಹಿ ಧೋರಣೆ ಶಿಕ್ಷಣ ವ್ಯವಸ್ಥೆಯಲ್ಲಿ ಅಡಕವಾಗುವುದರಿಂದ ಭವಿಷ್ಯದ ದೃಷ್ಟಿಯಿಂದ ಇದೊಂದು ದೊಡ್ಡ ಮಾರಕವಾಗಿ ಪರಿಮಿಸುವ ಸಾಧ್ಯತೆ ಇದೆ. ಹೀಗಾಗಿ ಖಾಸಗಿ ಸಹಭಾಗಿತ್ವವನ್ನು ಹೊಸ ನೀತಿಯಿಂದ ಹೊರಗೆ ತೆಗೆಯುವುದು ಒಳಿತು ಎಂದು ಪ್ರಾಧ್ಯಾಪಕರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಂ. ರಾಮಚಂದ್ರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಶಿಕ್ಷಣ ನೀತಿ ಆರೋಗ್ಯಕರ ಬೆಳವಣಿಗೆ. ಈ ನೀತಿಯನ್ನು ನೋಡಿದರೆ ಶಿಕ್ಷಕ ಕೇಂದ್ರೀತ ಪಠ್ಯದಿಂದ ವಿದ್ಯಾರ್ಥಿ ಕೇಂದ್ರೀತ ಪಠ್ಯಕ್ಕೆ ದಾಪುಗಾಲು ಇಡಲು ಸಾಧ್ಯವಿದೆ. ಶಾಲಾ-ಕಾಲೇಜುಗಳಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ಪ್ರತಿಯೊಬ್ಬರ ಕಡೆಗೆ ಇರುವ ಕೌಶಲದ ಮೂಲಕ ಜ್ಞಾನ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ನಿಯಮಾವಳಿಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ಅಭಿಪ್ರಾಯ ಪಡೆದುಕೊಳ್ಳಲು ಹಾಗೂ ಅದರ ಬಗೆಗೆ ಬೆಳಕು ಚೆಲ್ಲುವ ಕುರಿತು ಪ್ರಾಧ್ಯಾಪಕರು ಕೆಲವೊಂದು ವಿಷಯಗಳನ್ನು ಮಂಡಿಸಿದರು. ನೀತಿಯಲ್ಲಿರುವ ಅಂಶಗಳ ಬಗ್ಗೆ ಸಮಗ್ರವಾಗಿ ಸಲಹೆ-ಸೂಚನೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಬಸವರಾಜ ಪದ್ಮಶಾಲಿ, ಕುಲಸಚಿವರು (ಮೌಲ್ಯಮಾಪನ) ಪ್ರೊ| ರಂಗರಾಜು ವನದುರ್ಗ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ಆಂತರಿಕ ಗುಣಮಟ್ಟಕೋಶದ ಅಧ್ಯಕ್ಷ ಪ್ರೊ| ಶಿವಾನಂದ ಗೊರನಾಳೆ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ| ಎಸ್‌.ಎಂ. ಹುರಕಡ್ಲಿ ಇದ್ದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಲ್ಲಾ ನಿಕಾಯಗಳ ನಿರ್ದೇಶಕರು, ವಿಭಾಗಗಳ ಅಧ್ಯಕ್ಷರು, ಪ್ರಾಧ್ಯಾಪಕರು, ಜಿಲ್ಲೆಯ ಎಲ್ಲ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next