ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳಿಂದ ಕೂಡಿರಬೇಕು. ಕನ್ನಡ ಶಾಲೆಗಳು ಉಳಿಯಬೇಕು. ಕಾನೂನಿನ ನಡೆ ಹಳ್ಳಿ ಕಡೆ ಅಭಿಯಾನದಲ್ಲಿ ಗ್ರಾಮಗಳ ಸಮಸ್ಯೆ ಅರಿತುಕೊಳ್ಳಲು ಹಾಗೂ ಕಾನೂನಿನ ಅರಿವನ್ನು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಜಿಲ್ಲಾ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂದೀಪ್ ಸಾಲಿಯಾನ ತಿಳಿಸಿದರು.
ತಾಲೂಕಿನ ಕುಂದಾಣ ಹೋಬಳಿಯ ಅರುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ಸ್ಥಿತಿಗತಿ ಪರಿಶೀಲಿಸಿ ಮಾತನಾಡಿ, ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕಾದರೆ ಮೊದಲು ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಮಾಡಬೇಕು. ಒಂದು ಹಳ್ಳಿ ಎಂದರೆ ಅಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಈಗಾಗಲೇ ಕೊಯಿರ ಗ್ರಾಪಂ ವ್ಯಾಪ್ತಿಯ ಸದಸ್ಯರಿಗೆ ಮಾರ್ಗದರ್ಶನ, ಸಲಹೆ ಸೂಚನೆ ನೀಡಿದ್ದೇನೆ. ಅದರಂತೆ ಪರಿಪಾಲನೆ ಮಾಡಬೇಕು ಎಂದರು.
ಕನ್ನಡ ಶಾಲೆ ಅಭಿವೃದ್ಧಿಪಡಿಸಿ: ಅರ್ಟಿಕಲ್ 21ಎ ಪ್ರಕಾರ 6 ರಿಂದ 14ನೇ ವರ್ಷದೊಳಿಗಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂದು ಹೇಳಲಾಗಿದೆ. ಅದೇ ರೀತಿ ರೈಟ್-ಟು-ಎಜುಕೇಷನ್ ಆಕ್ಟ್‌ನಲ್ಲಿಯೂ ಶಿಕ್ಷಣ ಎಲ್ಲಾ ಮಕ್ಕಳಿಗೂ ಕೊಡಬೇಕೆಂದು ತಿಳಿಸುತ್ತದೆ. ಅದರ ಜೊತೆಗೆ ಕನ್ನಡವನ್ನು ಉಳಿಸಬೇಕು. ರಕ್ಷಣೆ ಮಾಡಬೇಕೆಂದು ಹೇಳುತ್ತೇವೆ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಇರಬಾರದು. ಪ್ರಥಮವಾಗಿ ಅನುಷ್ಠಾನಗೊಳಿಸಬೇಕಾದರೆ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಅಲ್ಲಿನ ಸಿಬ್ಬಂದಿಗಳಿಗೆ ವೇತನ ಸರಿಯಾಗಿ ಬರುತ್ತಿದೆಯೋ ಇಲ್ಲವೋ ಎಂಬುವುದನ್ನು ನೋಡಬೇಕು ಎಂದರು.
ಕೆರೆಗಳ ಅಭಿವೃದ್ಧಿಗೆ ಒತ್ತು: ಕಾನೂನು ಅರಿವಿನ ಜೊತೆಯಾಗಿ ಗ್ರಾಮದ ಬೆಟ್ಟ-ಗುಟ್ಟ, ಶಾಲೆಗಳು, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕಾನೂನಿನ ನಡೆ-ಹಳ್ಳಿ ಕಡೆ ಅಭಿಯಾನದಲ್ಲಿ ಹೆಚ್ಚುವರಿಯಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಅಭಿವೃದ್ಧಿ ಪತದತ್ತ ಸಾಗಬೇಕಾಗುತ್ತದೆ. ನ್ಯಾಯಧೀಶನಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದು, ಜಿಲ್ಲೆಯ ಐದು ತಾಲೂಕಿನಲ್ಲಿ ಭೇಟಿ ನೀಡಿ, ಅಲ್ಲಿನ ಶಾಲೆಗಳ ಸ್ಥಿತಿಗತಿಯನ್ನು ನೋಡಿ ಅದರ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಿ: ಕಾನೂನಿನ ನಡೆ-ಹಳ್ಳಿ ಕಡೆ ಅಭಿಯಾನದಡಿಯಲ್ಲಿ ಗ್ರಾಮವಾಸ್ತವ್ಯವನ್ನು ಸಹ ಪ್ರತಿವೊಂದು ತಾಲೂಕಿನಲ್ಲಿ ಮಾಡಲಾಗತ್ತದೆ. ನಮ್ಮ ಪೂರ್ವಿಕರು ಕೆರೆಕುಂಟೆಗಳನ್ನು ನಿರ್ಮಾಣ ಮಾಡಿದರು. ಆ ಕೆರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಬೇಕು. ಕಾನೂನಿಗೆ ಒಳಪಡುವ ವಿಚಾರವನ್ನು ಒಳಗೊಂಡಂತೆ, ಗ್ರಾಮಗಳಲ್ಲಿನ ಬೆಟ್ಟ, ಗುಟ್ಟ, ಶಾಲೆಗಳು, ಕೆರೆಗಳು ಅವುಗಳನ್ನು ಹೇಗೆ ಸಂರಕ್ಷಣೆ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಮಾಡಲಾಗುತ್ತದೆ ಎಂದರು.
ಕೊಯಿರ ಗ್ರಾಪಂ ಉಪಾಧ್ಯಕ್ಷ ಮುನಿಆಂಜಿನಪ್ಪ, ಸದಸ್ಯರಾದ ಮಮತಾ ಶಿವಾಜಿ, ಆಂಜಿನಮ್ಮ, ಬಿಂದು, ಪಿಡಿಒ ಗಂಗರಾಜು, ಕಾರ್ಯದರ್ಶಿ ಆದೇಪ್ಪ, ಶಾಲಾ ಮುಖ್ಯ ಶಿಕ್ಷಕ ಯತೀಶ್‌ಕುಮಾರ್, ಜಿಲ್ಲಾ ದಿವ್ಯಾಂಗ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಗ್ರಾಮಸ್ಥರು ಹಾಗೂ ಮಕ್ಕಳು ಇದ್ದರು.