Advertisement

ಆಹಾರ ಸಂಸ್ಕರಣಾ ಕಿರು ಉದ್ಯಮಕ್ಕೆ ಆದ್ಯತೆ ನೀಡಿ:

03:49 PM Jun 23, 2022 | Team Udayavani |

ಹಾವೇರಿ: ಆತ್ಮ ನಿರ್ಭರ ಯೋಜನೆಯಡಿ ಪ್ರಧಾನಮಂತ್ರಿ ಕಿರು ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ(ಪಿಎಂಎಫ್‌ಎಂಇ) ಯೋಜನೆಯಡಿ ಕೃಷಿ ಆಧಾರಿತ ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತ ಹೊಸ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ತರಬೇತಿ, ಸಕಾಲದಲ್ಲಿ ಬ್ಯಾಂಕಿನಿಂದ ಸಾಲ ನೀಡುವ ಮೂಲಕ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಬೇಕೆಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪಿಎಂಎಫ್‌ಎಂಇ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಈ ಯೋಜನೆ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಹೆಚ್ಚು ಯುವ ಸಮೂಹ ಸಣ್ಣ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಹಿತಿ ನೀಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಜೊತೆಗೆ ಜಿಲ್ಲೆಯಲ್ಲಿ ಹೆಚ್ಚು ಕೃಷಿ ಆಧಾರಿತ ಸಣ್ಣ ಉದ್ಯಮಗಳು ಸ್ಥಾಪನೆಗೊಳ್ಳಲಿವೆ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‌ಗಳು ಸಕಾಲದಲ್ಲಿ ಸಾಲ ಮಂಜೂರಾತಿ ನೀಡಲು ಸೂಚನೆ ನೀಡಿದರು.

ಪ್ರಧಾನಮಂತ್ರಿ ಕಿರು ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ನಿಯಮ ಬದಲಾಯಿಸಿ ಆಹಾರ ಸಂಸ್ಕರಣದ ಹಲವು ಉತ್ಪನ್ನಗಳ ಕಿರು ಉದ್ಯಮ ಸ್ಥಾಪಿಸಲು ಕೇಂದ್ರ ಸರ್ಕಾರ ಇದೀಗ ಶೇ.50ರಷ್ಟು ಸಹಾಯ ಧನ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿ ಶೇ.15 ರಷ್ಟು ಸಹಾಯಧನ ನೀಡುತ್ತದೆ. ಬ್ಯಾಂಕ್‌ನಿಂದ ಸಾಲದ ನೆರವು ದೊರೆಯಲಿದೆ. ಘಟಕ್ಕೆ 10 ಲಕ್ಷದವರೆಗೆ ಬ್ಯಾಂಕಿನಿಂದ ಸಾಲ ಪಡೆಯಬಹುದಾಗಿದೆ. ಈ ಕುರಿತಂತೆ ಆಸಕ್ತರಿಗೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ಹೆಚ್ಚು ಆಹಾರ ಸಂಸ್ಕರಣಾ ಘಟಕ ಗಳು ತೆರೆಯುವ ಕುರಿತಂತೆ ಅಗತ್ಯ ಕ್ರಮ ವಹಿಸ ಬೇಕು. ಸಕಾಲದಲ್ಲಿ ಮಾರ್ಗದರ್ಶನ ಹಾಗೂ ನೆರವು ಒದಗಿಸಬೇಕು. ಇದರೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಕಡಿಮೆ ಬಡ್ಡಿ ದರ ದಲ್ಲಿ ಸರಳ ರೀತಿಯಲ್ಲಿ ಹೆಚ್ಚಿನ ಸಾಲ ದೊರೆಯಲಿದೆ. ಈ ಕುರಿತಂತೆ ಮಾಹಿತಿ ನೀಡಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚು ಉದ್ಯಮಗಳನ್ನು ಆರಂಭಿಸುವ ಕುರಿತಂತೆ ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇಂಟಿಗ್ರೇಟೆಡ್‌ ಕೈಗಾರಿಕಾ ಟೌನ್‌ಶಿಪ್‌ ಯೋಜನೆಯಡಿ ಒಂದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಮಂಜೂರಾತಿ ದೊರಕಿದೆ. ಹೈಟೆಕ್‌ ರೇಷ್ಮೆ ಮಾರುಕಟ್ಟೆ, ಜವಳಿ ಪಾರ್ಕ್‌ ಸೇರಿದಂತೆ ಹಲವು ಉದ್ಯಮಗಳನ್ನು ಸ್ಥಾಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ಪ್ರಧಾನ ಆಹಾರ ಸಂಸ್ಕರಣಾ ಕಿರು ಉದ್ಯಮಗಳನ್ನು ಸ್ಥಾಪಿ ಸಲು ಹೆಚ್ಚಿನ ಉತ್ತೇಜನ ನೀಡಬೇಕೆಂದು ಕೃಷಿ, ತೋಟಗಾರಿಕೆ ಹಾಗೂ ನಬಾರ್ಡ್‌ ಸೇರಿದಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಂಟಿ ಕೃಷಿ ನಿರ್ದೇಶಕ ಮಂಜುನಾಥ್‌ ಮಾತನಾಡಿ, ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆ ಯಲ್ಲಿ ಈಗಾಗಲೇ 14 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ನೆರವು ಒದಗಿಸಲಾಗಿದೆ. 136.85 ಲಕ್ಷ ರೂ. ಸಾಲ ನೀಡಲಾಗಿದೆ. ಕೇಂದ್ರದಿಂದ 47.90 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ 20.52 ಲಕ್ಷ ರೂ. ಸಹಾಯಧನ ಫಲಾನು ಭವಿಗಳಿಗೆ ಸಂದಾಯ ಮಾಡಲಾಗಿದೆ. ಬೆಲ್ಲದ ಗಾಣ, ಖಾರದಪುಡಿ ಘಟಕ, ಹಿಟ್ಟಿನ ಗಿರಣಿ, ಎಣ್ಣೆ ಗಾಣ, ಜಿರೇನಿಯಂ ಎಣ್ಣೆ ಘಟಕ, ರೊಟ್ಟಿ ತಯಾರಿಕಾ ಘಟಕ ಸೇರಿದಂತೆ 14 ಕಿರು ಆಹಾರ ಸಂಸ್ಕರಣಾ ಘಟಕಗಳು ಕಾರ್ಯಾರಂಭ ಮಾಡಿವೆ.ಹೊಸದಾಗಿ ಘಟಕ ಆರಂಭಿಸಲು 36 ಜನ ಅರ್ಜಿ ಸಲ್ಲಿಸಿದ್ದು, ಬ್ಯಾಂಕ್‌ ಮಂಜೂರಾತಿಗೆ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು. ಉತ್ಪಾದಕರೊಂದಿಗೆ ಸಂವಾದ: ಇದೇ ವೇಳೆ ಜಿಲ್ಲಾ ಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಆಹಾರ ಸಂಸ್ಕರಣಾ ಕಿರು ಘಟಕ ಸ್ಥಾಪಿಸಿದ ವಿವಿಧ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು.

ಆಹಾರ ಸಂಸ್ಕರಣಾ ಘಟಕಗಳ ಪ್ರಕ್ರಿಯೆ, ಮಾರುಕಟ್ಟೆ ವ್ಯವಸ್ಥೆ, ಪ್ಯಾಕಿಂಗ್‌ ವ್ಯವಸ್ಥೆ ಕುರಿತಂತೆ ಮಾಹಿತಿ ಪಡೆದು, ಸಲಹೆ ನೀಡಿದರು. ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ, ನಬಾರ್ಡ್‌ನ ಮಹದೇವ ಕೀರ್ತಿ ಇತರರಿದ್ದರು.

ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಕಿರು ಉದ್ಯಮ ಆರಂಭಿಸಲು ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಸಾಲ ಮಂಜೂರಾತಿ ನೀಡಬೇಕು. ಜೊತೆಗೆ ಸರ್ಕಾರದ ಸಬ್ಸಿಡಿ ಹಣ ಸಕಾಲದಲ್ಲಿ ತಲುಪಬೇಕು. ಉದ್ಯಮ ಆರಂಭಿಸಿದವರಿಗೆ ಅಗತ್ಯ ಮಾರ್ಗ ದರ್ಶನ, ಮಾರುಕಟ್ಟೆ ವ್ಯವಸ್ಥೆ, ಬ್ರಾಂಡೆಡ್‌ ನೋಂದಣಿ, ಪ್ಯಾಕಿಂಗ್‌ ವ್ಯವಸ್ಥೆ ಒಳಗೊಂಡಂತೆ ತರಬೇತಿ ನೀಡಲು ಅಧಿಕಾರಿಗಳು ಕ್ರಮ ವಹಿಸಬೇಕು. –ಸಂಜಯ ಶೆಟ್ಟೆಣ್ಣವರ, ಡಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next