Advertisement

Naxal; ಪುಷ್ಪಗಿರಿ ಜನರ ನೆಮ್ಮದಿಯ ಬದುಕಿಗೆ ಭಂಗ: ಅತ್ತ ದರಿ ಇತ್ತ ನಕ್ಸಲರ ಕಿರಿಕಿರಿ

12:33 AM Mar 31, 2024 | Team Udayavani |

ಕಾರ್ಕಳ/ ಸುಬ್ರಹ್ಮಣ್ಯ: ಮಲಗಿದರೆ ನಿದ್ರೆ ಬರದು. ಸಣ್ಣ ಸದ್ದಾದರೂ ನಕ್ಸಲರು ಬಂದರಾ ಎನ್ನುವ ಆತಂಕ. ಹಗಲು ಹೊತ್ತಿನಲ್ಲೂ ಓಡಾಡಲು ಭಯ ಪಡುವ, ಬೆಳಕು ಮಾಸುತ್ತಿದ್ದಂತೆ ಮನೆ ಸೇರಿಕೊಳ್ಳಬೇಕಾದ ಸ್ಥಿತಿ ಸದ್ಯ ಪುಷ್ಪಗಿರಿ ತಪ್ಪಲಿನ ಗ್ರಾಮಸ್ಥರದು.

Advertisement

ಇತ್ತೀಚೆಗಿನವರೆಗೂ ಅವರನ್ನು ಕಾಡಾನೆ, ಚಿರತೆಯಂತಹ ವನ್ಯ ಜೀವಿಗಳ ಭಯ ಕಾಡುತ್ತಿತ್ತು. ಆದರೀಗ ನಕ್ಸಲರ ಅಂಜಿಕೆ. ಜತೆಗೆ ನಕ್ಸಲರ ನಿಗ್ರಹ ಪಡೆಯ ಆಗಮನದ ಆತಂಕ. ಸುಬ್ರಹ್ಮಣ್ಯ, ಐನಕಿದು, ಬಾಳುಗೋಡು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಪ್ರದೇಶಗಳಲ್ಲಿ ಈಗ ನಕ್ಸಲ್‌ ಸಂಚಾರದ್ದೇ ಸುದ್ದಿ. ದಕ್ಷಿಣ ಕನ್ನಡದಲ್ಲಿ ಕೆಲವು ವರ್ಷಗಳಿಂದ ಮಾಸಿದ್ದ ನಕ್ಸಲ್‌ ಛಾಯೆ ಅದಕ್ಕೂ ಮುನ್ನ ಕೇರಳ ಭಾಗದಲ್ಲಿ ಸಕ್ರಿಯವಾಗಿತ್ತು. ಚುನಾವಣೆ ಸನಿಹದಲ್ಲಿ ಇಲ್ಲಿ ಕಾಣಿಸಿಕೊಂಡಿದೆ.

ಉಡುಪಿಯ ಕುಂದಾಪುರ, ಕೊಡಗು, ದಕ್ಷಿಣ ಕನ್ನಡ ಗಡಿ ಭಾಗದ ಕೂಜುಮಲೆ, ಸುಬ್ರಹ್ಮಣ್ಯ ಸಮೀಪದ ಐನಕಿದು, ತೋಟದ ಮೂಲೆ ಮೊದಲಾದೆಡೆ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಅಭಿಪ್ರಾಯವಿದೆ. ನಕ್ಸಲರ ಪತ್ತೆಗಾಗಿ ಈಗ ನಿತ್ಯವೂ ನಕ್ಸಲ್‌ ನಿಗ್ರಹ ಪಡೆಯ ವಾಹನಗಳು ಸುತ್ತು ಹೊಡೆಯುತ್ತಿವೆ.

ಅಪಾಯ ತಪ್ಪಿದ್ದಲ್ಲ
ರಾತ್ರಿಯಾಗುತ್ತಿದ್ದಂತೆ ಮನೆಯ ಅಂಗಳಕ್ಕೆ ನಕ್ಸಲರು ಭೇಟಿ ನೀಡುತ್ತಾ ರೆಂದು ಹೇಳಲಾಗುತ್ತಿದೆ. ಪೊಲೀಸರಿಗೆ ಹೇಳಿ ಏನಾದರೂ ಸಮಸ್ಯೆ ಉದ್ಭವಿಸಿ ದರೆ ಎಂಬ ಭಯ ಒಂದೆಡೆ. ಪೊಲೀಸರ ಎದುರು ಸುಳ್ಳು ಹೇಳಲು ಸಾಧ್ಯವೇ ಎಂಬ ಆತಂಕ ಗ್ರಾಮಸ್ಥರದ್ದು.

ನಮ್ಮ ಹೆಸರಿನಲ್ಲಿ ಜಮೀನಿಲ್ಲ. ಕಾಡಂಚಿನಲ್ಲಿ ಒಂದಿಷ್ಟು ಅಡಿಕೆ ಬೆಳೆದಿದ್ದೇವೆ. ದಾಖಲೆ ಇಲ್ಲದೆ ಇದ್ದರೆ ಪರಿಹಾರ ಸಿಗದು. ಮೂಲಸೌಕರ್ಯವೂ ಇಲ್ಲ. ಕಾಡು ಪ್ರಾಣಿಗಳ ಹಾವಳಿಯೂ ಇದೆ. ಅರಣ್ಯದಂಚಿನ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಕಸ್ತೂರಿರಂಗನ್‌ ವರದಿ ಆತಂಕ ದೂರವಾಗಿಲ್ಲ. ಇವುಗಳಿಗೆ ಮುಕ್ತಿ ತುರ್ತಾಗಿ ಆಗ ಬೇಕಾದ ಕೆಲಸ ಎಂಬ ಅಭಿಪ್ರಾಯ ಹಲವರದ್ದು. ಈ ಕೊರತೆಯೇ ನಕ್ಸಲರ ಅಸ್ತ್ರ ಗಳಾಗುತ್ತಿವೆಯೇ ಎಂಬುದು ಆತಂಕ.

Advertisement

ಎದೆಗುಂದದ ಜನರಿವರು
ಪಶ್ಚಿಮಘಟ್ಟ ಸಾಲಿನಲ್ಲಿ ಅನೇಕ ಜನವಸತಿ ಪ್ರದೇಶಗಳಿವೆ. ಪುಷ್ಪಗಿರಿ ತಪ್ಪಲು ಪ್ರಕೃತಿ ಸೊಬಗಿನ ಊರು. ಎಷ್ಟೋ ಕಾಲದಿಂದ ಇಲ್ಲಿ ಕೃಷಿ, ಉಪಕಸುಬುಗಳನ್ನು ಆಶ್ರಯಿಸಿ ಜನರು ಬದುಕುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಗುಡ್ಡ ಕುಸಿತ, ಪ್ರವಾಹ ಎದುರಾಗಿತ್ತು. ಆಗಲೂ ಎದೆಗುಂದದೆ ಮತ್ತೆ ಬದುಕು ಕಟ್ಟಿಕೊಂಡ ಜನರಿಗೆ ಈಗ ನಕ್ಸಲರ ಕಾಟ ಕಾಡತೊಡಗಿದೆ.
ನಕ್ಸಲರು ಕಾಣಿಸಿಕೊಂಡಾಗ ಎಎನ್‌ಎಫ್ ಪಡೆ “ಕೂಬಿಂಗ್‌’ ಎನ್ನುವ ಕಾರ್ಯಾಚರಣೆ ನಡೆಸುತ್ತದೆ. ಬಳಿಕ ಸ್ವಲ್ಪ ಕಾಲ ನಕ್ಸಲರ ಸುಳಿವಿರದು. ಆಗ ನಕ್ಸಲ್‌ ನಿಗ್ರಹ ಪಡೆಯೂ “ಆರಾಮ’ ಸ್ಥಿತಿಗೆ ತಲುಪುತ್ತದೆ. ಮತ್ತೆ ನಕ್ಸಲರ ಸಂಚಾರದ ಸದ್ದು ಆದಾಗ, ವದಂತಿ ಹಬ್ಬಿದಾಗ ಪಡೆಯುವ ಕಾರ್ಯಾಚರಣೆಯಲ್ಲಿ ತೊಡಗುತ್ತದೆ. ಹಾಗಾಗಿ ನಕ್ಸರ ನಿಗ್ರಹದ ಜತೆಗೆ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮೂಲಕ ಸರಕಾರ ಅಭಿವೃದ್ಧಿಗೆ ವೇಗ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.

ಗಾಡ್ಗೀಳ್‌, ಕಸ್ತೂರಿರಂಗನ್‌ ವರದಿ, ಆನೆ ಕಾರಿಡಾರ್‌ ಯೋಜನೆ -ಹೀಗೆ ಹತ್ತಾರು ಯೋಜನೆ ಅನುಷ್ಠಾನದ ವಿರುದ್ಧ ಹೋರಾಟ ಈ ಹಿಂದೆ ಆರಂಭಗೊಂಡಿತ್ತು. ಮೂಲಸೌಕರ್ಯ ಕೊರತೆ ಬಗೆಹರಿಯಬೇಕೆಂಬುದು ಹಲವರ ಅಭಿಪ್ರಾಯ.

ನಕ್ಸಲರು ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಈಗಾಗಲೇ ನಕ್ಸಲ್‌ ನಿಗ್ರಹ ಪಡೆ ಹಾಗೂ ಪೊಲೀಸ್‌ ಇಲಾಖೆ ಸೂಕ್ತವಾದ ಕ್ರಮ ಕೈಗೊಳ್ಳುತ್ತಿದೆ. ಜನರು ಯಾವುದೇ ಭಯ, ಆತಂಕ ಪಡುವ ಅಗತ್ಯ ಇಲ್ಲ. ಅಲ್ಲಿ ಬೇಕಾಗುವ ಮುಂಜಾಗ್ರತೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜನರು ಭಯಭೀತರಾಗಬೇಕಿಲ್ಲ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next