ಬೈಲಹೊಂಗಲ: ಶಿಕ್ಷಣದ ಗುಣಮಟ್ಟ ಕುಸಿಯಬಾರದು, ನರೇಗಾ ಯೋಜನೆಯಡಿ ಕೆಲಸ ನೀಡುವುದು, ಗ್ರಾಮ ನೈರ್ಮಲ್ಯಗಳ ಬಗ್ಗೆ ಜಾಗೃತಿ ವಹಿಸಿ ಕೆಲಸ ಮಾಡಬೇಕೆಂದು ಜಿಪಂ ಸಿಇಒ ರಾಜೇಂದ್ರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಪಿಡಿಒ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬರದಿಂದ ಕೃಷಿ ಕೂಲಿಕಾರರಿಗೆ ಕೆಲಸದ ಅಗತ್ಯತೆ ಇರುವುದರಿಂದ 150 ದಿನದವರೆಗೆ ಕೆಲಸ ನೀಡಬೇಕೆಂಬ ರೈತರ ಬೇಡಿಕೆಗೆ ಸ್ಪಂದಿಸಿದ ಸಿಇಒ, ನರೇಗಾದಡಿ ಗ್ರಾಮಗಳ ರಸ್ತೆ, ಚರಂಡಿ ಅಷ್ಟೇ ಅಲ್ಲ, ಆಟದ ಮೈದಾನ, ಶಾಲೆಗಳ ಶೌಚಾಲಯ, ಕಾಂಪೌಂಡ್ ನಿರ್ಮಾಣ, ದನಗಳ ಕೊಟ್ಟಿಗೆ, ನೀರಿನ ತೊಟ್ಟಿಗೆ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಶಾಲಾ ದುರಸ್ತಿ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪದಡಿ ನೀಡುವ ಅನುದಾನ ಪಡೆದು ಕಾರ್ಯ ನಿರ್ವಹಿಸಬೇಕು. ಗ್ರಾಮಗಳ ಸ್ವಚ್ಛತೆ ಪಂಚಾಯತಿಗಳ ಪ್ರಮುಖ ಕೆಲಸ. ಗರ್ಭಿಣಿಯರಿಗೆ ತುರ್ತು ಅಂಬ್ಯುಲೆನ್ಸ್ ಸೇವೆ, ಫಾಗಿಂಗ್ ಕಾರ್ಯ ನಡೆಸಬೇಕು. ರೈತರಿಗೆ ನರೇಗಾದಡಿ ಹೆಚ್ಚು ಕೆಲಸ ನೀಡಬೇಕು. ಪಂಚಾಯತಿ ಸಿಬ್ಬಂದಿಗೆ ಬಯೋಮೆಟ್ರಿಕ್ ಜಾರಿಗೊಳಿಸಲು ಸೂಚನೆ ನೀಡಿದರು.
ತಾಲೂಕಿನ ಕೆಲ ಶಿಕ್ಷಕರು ಬಿಇಒ ಕಾರ್ಯಾಲಯದಲ್ಲಿ ನಿತ್ಯ ಆಗಮಿಸಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಇಒ ಶಿಸ್ತು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ಶಾಲಾ ಗೋಡೆಗಳ ಮೇಲೆ ಸ್ವಚ್ಛ ಭಾರತ, ಪೊಲೀಸ್ ಜಾಗೃತಿ, ಪ್ರಾಣಿ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಬೇಕು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಸ್ವಚ್ಛವಿರಬೇಕು. ಪ್ರತಿ ಶಾಲೆಯಲ್ಲಿ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ವ್ಯವಸ್ಥೆ ಇರಬೇಕು. ಇದರಲ್ಲಿ ಲೋಪ ಉಂಟಾದರೆ, ಪಿಡಿಒ, ಶಿಕ್ಷಣಾಧಿಕಾರಿ, ತಾಲೂಕು ವೈದ್ಯಾಧಿಕಾರಿಗಳನ್ನು ಜವಾಬ್ದಾರಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಇಒ ಸಮೀರ್ ಮುಲ್ಲಾ, ತಾಪಂ ಸಹಾಯಕ ನಿರ್ದೇಶಕ ಸುಭಾಸ ಸಂಪಗಾಂವಿ ಹಾಗೂ ಪಿಡಿಒಗಳು, ಅಧಿಕಾರಿಗಳು ಉಪಸ್ಥಿತರಿದ್ದರು.