ಭಾಲ್ಕಿ: ಮಹಿಳೆಯರು ವಾಹನ ಚಾಲನೆ ತರಬೇತಿ ಪಡೆದು ಘನತ್ಯಾಜ್ಯ ಕಸ ವಿಲೇವಾರಿ ವಾಹನಗಳ ಚಾಲಕರಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಸ್ವಸಹಾಯ ಸಂಘದ ಮಹಿಳೆಯರ ಲಘು ವಾಹನದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ ವಿನೂತನ ಪ್ರಯೋಗ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ಘನತ್ಯಾಜ್ಯ ಕಸ ವಿಲೇವಾರಿ ವಾಹನಗಳ ಚಾಲನೆಗೆ ಮಹಿಳೆಯರು ಮುಂದೆ ಬಂದಿರುವುದು ಸಂತಸದ ಸಂಗತಿ. ಈ ಕುರಿತಂತೆ ಪ್ರಥಮ ಬಾರಿಗೆ ಘನತ್ಯಾಜ್ಯ ಕಸ ವಿಲೇವಾರಿ ಕಾರ್ಯ ಕೈಗೊಳ್ಳಲು 30 ದಿನಗಳ ಲಘು ವಾಹನ ತರಬೇತಿ ನೀಡಲಾಗುತ್ತದೆ ಎಂದರು.
ಮಹಿಳೆಯರು ವಾಹನ ಚಾಲನಾ ತರಬೇತಿಯನ್ನು ಸಂಪೂರ್ಣ ಪಡೆದುಕೊಳ್ಳಬೇಕು. ಮಹಿಳಾ ಚಾಲಕರಾಗಿ ವಾಹನ ಚಾಲನೆ ಜತೆಗೆ ಗ್ರಾಮೀಣ ಸ್ವಚ್ಛತೆಯ ಕಾರ್ಯಕ್ಕೆ ಕೈಜೋಡಿಸಬೇಕು. ಈ ಕೆಲಸದಿಂದ ತಾವು ಆರ್ಥಿಕವಾಗಿ ಸಬಲರಾಗಬಹುದು. ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಬಹುದು. ಮಹಿಳೆಯರು ಪ್ರತಿ ಹಂತದಲ್ಲೂ ಧೈರ್ಯದಿಂದ ಮುನ್ನಡೆದರೆ ನಿಶ್ಚಿತವಾಗಿಯೂ ಯಶಸ್ಸು ಹೊಂದಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಇದ್ದರು.