Advertisement

ರೈತರ ಆತ್ಮಹತ್ಯೆ ತಡೆಯಲು ಮುಂದಾಗಿ

01:16 PM Oct 30, 2017 | |

ವಿಜಯಪುರ: ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ನಕಾರಾತ್ಮಕ ಪರಿಸ್ಥಿತಿ ಸಾರ್ವತ್ರಿಕವಾಗಿರುವ ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಪ್ರಗತಿಪರ ರೈತರು ಇತರೆ ರೈತರಿಗೆ ಮಾದರಿ ಕೃಷಿಯ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಹೇಳಿದರು.

Advertisement

ವಿಜಯಪುರದ ಹಿಟ್ನಳಿಯಲ್ಲಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಪರ ಯಶಸ್ವಿ ರೈತರಿಂದ ರೈತರಿಗೆ ಅನುಭವ ಹಂಚಿಕೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಷ್ಟ, ಸಾಲ ಎಂದೆಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಂತದಲ್ಲಿ ಸಂಕಷ್ಟಗಳ ಮಧ್ಯೆಯೂ ಕೃಷಿಯಲ್ಲೇ ಸಾಧನೆ ಮಾಡಿ ಉತ್ತಮ ಬದುಕು ರೂಪಿಸಿಕೊಂಡಿರುವ ಪ್ರಗತಿಪರ ರೈತರು ಮಾರ್ಗದರ್ಶನ ಮಾಡಲಿ ಎಂದು ಸಲಹೆ ನೀಡಿದರು.

ಕೃಷಿ ಆಧಾರಿತ ಗ್ರಾಮೀಣ ಪ್ರದೇಶದಲ್ಲಿ ರೈತರಲ್ಲಿ ಆತ್ಮವಿಶ್ವಾಸ ತುಂಬಿಸುವ ಹಾಗೂ ಆಧುನಿಕ ಜೀವನ ಶೈಲಿಗೆ ತಕ್ಕಂತೆ ಕೃಷಿಯಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಲಾಭ ಪಡೆಯಲು ಮುಂದಾಗಬೇಕು. ಏಕ ಬೆಳೆ ಬೆಳೆಯುವ ಬದಲು ಹಲವು ಬೆಳೆ ಹಾಗೂ ಕೃಷಿ ಪೂರಕ ಜಾನುವಾರು ಸಾಕಾಣಿಕೆಯಂಥ ಸಹ ಆದಾಯದ ಕೆಲಸಗಳನ್ನೂ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ| ಮಂಜುನಾಥ ಮಾತನಾಡಿ, ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಚಟುವಟಿಕೆ ಮಾಡಿದಲ್ಲಿ ಖಂಡಿತ ಆದಾಯ ಪಡೆಯಲು ಸಾಧ್ಯವಿದೆ. ಕೃಷಿಯ ಕುರಿತು ನೂತನ ಆವಿಷ್ಕಾರದ ಭೌತಿಕ ಜ್ಞಾನ ಪಡೆಯುವುದು ಕೂಡ ಇಂದಿನ ಅಗತ್ಯವಾಗಿದೆ. ಅದ್ದರಿಂದ ಇಂತಹ ತರಬೇತಿ ಕಾರ್ಯಕ್ರಮದಿಂದ ರೈತರು ಸರಿಯಾದ ಮಾಹಿತಿ ಪಡೆದು ಕೃಷಿಯ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಡಾ| ವಿಲಿಯಂ ರಾಜಶೇಖರ ಅವರು, ಸಾವಯವ ಕೃಷಿಯಲ್ಲಿ ಸೂಕ್ಷ್ಮಾಣು ಜೀವಿಗಳು ಮಹತ್ವದ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಪ್ರಾಸ್ತಾವಿಕ ಮಾತನಾಡಿದ ಕೃಷಿ ವಿಸ್ತರಣಾ ಮುಂದಾಳು ಡಾ| ಆರ್‌.ಬಿ. ಬೆಳ್ಳಿ, ನೋಡಿ ಕಲಿ, ಮಾಡಿ ತಿಳಿ ಎಂಬಂತೆ ಅನುಭವಸ್ಥ ಯಶಸ್ವಿ ರೈತರ ಯಶೋಗಾಥೆಯನ್ನು ಅವರದೇ ಮಾತಿನಿಂದ ಇತರೆ ರೈತರಿಗೆ ಪರಿಣಾಮಕಾರಿಯಾಗಿ ತಿಳಿಸಿದರೆ ಪ್ರೇರಣೆ ಹಾಗೂ ಪ್ರೋತ್ಸಾಹದ ಆತ್ವವಿಶ್ವಾಸ ಮೂಡಲಿದೆ ಎಂದರು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅನುಭವ ಹಂಚಿಕೊಂಡ ಕೊಲ್ಹಾರದ ಪ್ರಗತಿಪರ ರೈತ, ಕೃಷಿ ಪಂಡಿತ ಪ್ರಶಸ್ತಿ ವಿಜೇತ ಸಿದ್ದಪ್ಪ ಬಾಲಗೊಂಡ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಒಳ್ಳೆಯ ಯೋಚನೆ ಮತ್ತು ಯೋಜನೆಯಿಂದ ಒಕ್ಕಲುತನ ಮಾಡುವುದರಿಂದ ಕೃಷಿಯಲ್ಲಿ ನಿರೀಕ್ಷೆ ಮೀರಿದ ಲಾಭ ಪಡೆಯಲು ಸಾಧ್ಯವಿದೆ ಎಂದರು.

ಮಹಾಲಿಂಗಪುರದ ರೋಹಿಣಿ ಬಯೋಟೆಕ್‌ ಸಂಸ್ಥಾಪಕ ಹಾಗೂ ಕೃಷಿ ಪಂಡಿತ ಮಲ್ಲಪ್ಪ ಕಟ್ಟಿ ಇವರು ಸಸ್ಯ, ಭೂಮಿ,
ಹವಾಮಾನ ಆಧಾರಿತ ಕೃಷಿಯಲ್ಲಿ ಲಾಭ ಇರುವುದಾಗಿ ಅನುಭವ ಹಂಚಿಕೊಂಡರು. ಪ್ರಗತಿಪರ ಸಾವಯವ ಕೃಷಿಕ ರೈತರಾದ ಅರವಿಂದ ಕೊಪ್ಪ, ಸಮಗ್ರ ಕೃಷಿಕ ಮಹಾಂತೇಶ ಕವಲಗಿ, ಉಪಕಸುಬು ಕುರಿತು ಪಾರ್ವತಿ ಕೋರಳ್ಳಿ, ಹೈಡ್ರೋಪೋನಿಕ್ಸ್‌ ಕುರಿತು ಹನುಮಂತ ಸಾರವಾಡ ಅವರು ರೈತರೊಂದಿಗೆ ತಮ್ಮ ಸಾಧನೆಯ ಅನುಭವ ಹಂಚಿಕೊಂಡರು.

ತಜ್ಞರಾದ ಡಾ| ಎಂ.ಎಸ್‌. ಧನಲಪ್ಪಗೋಳ, ಡಾ| ಎಸ್‌.ಎಂ.ವಸ್ತ್ರದ, ಡಾ| ಎಸ್‌.ಜಿ. ಆಸ್ಕಿ, ಡಾ| ಕಪೀಲ ಪಾಟೀಲ, ಮೇಘಾ ರಾಯ್ಕರ್‌, ಶ್ರೀಶೈಲ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next