Advertisement

ತತ್ವ ಪದಗಳೇ ಜೀವನದ ತತ್ವ

11:20 AM Jul 11, 2017 | |

ಬೆಂಗಳೂರು: ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ತತ್ವಪದಗಳು ಜನಜೀವನದ ಅವಿಭಾಜ್ಯ ಅಂಗಗಳಾಗಿವೆ. ಬದುಕು ಅರ್ಥಪೂರ್ಣವಾಗಬೇಕಾದರೆ ಪ್ರತಿಯೊಬ್ಬರು ಇದನ್ನು ತಿಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. 

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾಕೇಂದ್ರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ರವೀಂದ್ರಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ತತ್ವಪದಗಳ 32 ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 

ಕನ್ನಡದ ಇತರ ಸಾಹಿತ್ಯಗಳಂತೆ ತತ್ವಪದಗಳಿಗೆ ಮಹತ್ವ ಸಿಕ್ಕಿರಲಿಲ್ಲ. ತತ್ವಪದಗಳು ಜೀವನದ ತತ್ವಗಳಾಗಿವೆ. ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಮುಂತಾದವುಗಳಿಗೆ ಹೆಚ್ಚು ಬೆಂಬಲ ನೀಡುತ್ತಿದೆ. ಬಹಳ ಹಿಂದೆಯೇ ಆಗಬೇಕಾದ ಕೆಲಸವಿದು. ಈಗ ಅದಕ್ಕೆ ಮಹತ್ವ ನೀಡಿದ್ದು, ಈಗ 32 ಸಂಪುಟಗಳನ್ನು ತಂದಿದ್ದು ಅದ್ಭುತ ಕೆಲಸ.

ಒಟ್ಟು 50 ಸಂಪುಟ ಹೊರ ತರುವ ಉದ್ದೇಶ ಹೊಂದಲಾಗಿದ್ದು ಉಳಿದ ಸಂಪುಟಗಳನ್ನ ಶೀಘ್ರವೇ ಬಿಡುಗಡೆ ಮಾಡಲಾಗುವುದು.ಹಾಡಿನ ರೂಪದಲ್ಲಿದ್ದ ತತ್ವಪದಗಳಿಗೆ ಅಕ್ಷರ ರೂಪ ನೀಡಿ ಪುಸ್ತಕವಾಗಿ ಹೊರತಂದಿದ್ದೇವೆ. ನಾಡಿನ ಪ್ರತಿಯೊಬ್ಬರಿಗೂ ಇದು ತಲುಪಬೇಕೆಂಬ ಉದ್ದೇಶದಿಂದ ಗ್ರಂಥಾಲಯಗಳಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ಜಾತಿ, ಧರ್ಮ, ವರ್ಣ, ಮೇಲು, ಕೀಳೆಂಬ ಎಲ್ಲೆಯನ್ನು ದಾಟಿ ವಿಶ್ವಮಾನವ ಪರಂಪರೆಯನ್ನು ತತ್ವಪದಗಳಲ್ಲಿ ಕಾಣುತ್ತೇವೆ. ಗ್ರಾಮೀಣ ಪ್ರದೇಶದ ಜನರ ವ್ಯಕ್ತಿತ್ವ ಬೆಳೆಯಲು ಕೂಡ ಈ ತತ್ವಪದಗಳೇ ಹೆಚ್ಚು ಪ್ರೇರಣೆ. ಸುಮಾರು 4.35 ಕೋಟಿ ರೂ.ವೆಚ್ಚದಲ್ಲಿ ನಾಡಿನ ಎಲ್ಲಾ ಭಾಗದ ತತ್ವಪದಗಳನ್ನು ಸಂಗ್ರಹಿಸಿ ಸುಮಾರು 50 ಸಂಪುಟಗಳನ್ನು ಮಾಡುವ ಗುರಿ ಇಲಾಖೆಯದ್ದು. ಅದನ್ನು ಸಮರ್ಥವಾಗಿಯೇ ಸಂಪಾದನ ಮಂಡಳಿ ಹಾಗೂ ವಿದ್ವಾಂಸರು ಮಾಡಿದ್ದಾರೆ ಎಂದರು.

Advertisement

ತತ್ವಪದಕಾರರ ಗೀತೆಗಳನ್ನು ಗಾಯನಕ್ಕೆ ಅಳವಡಿಸಿ, ಅಂತಾರ್ಜಾಲದಲ್ಲಿ ಪ್ರಕಟಿಸುವ ಗುರಿ ಇದೆ. ಆನ್‌ಲೈನ್‌ನಲ್ಲೂ ತತ್ವಪದಗಳ ಎಲ್ಲ ಕೃತಿಗಳನ್ನು ಅಪ್‌ಲೋಡ್‌ ಮಾಡಲಾಗುವುದು. ಇಲಾಖೆಯ ಅಧಿಕೃತ ಅಂತಾರ್ಜಾಲ ತಾಣ “ಕಣಜ’ದಲ್ಲಿ ಪುಸ್ತಕವನ್ನು ಮುಂದಿನ ದಿನಗಳಲ್ಲಿ ವೀಕ್ಷಿಸಬಹುದಾಗಿದೆ. ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 

ತತ್ವಪದಗಳ ಸಂಪುಟದ ಸಂಪಾದನ ಸಮಿತಿ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಮಾತನಡಿ, ಈವರೆಗೆ ಈ ಪ್ರಮಾಣದ ಸಾಹಿತ್ಯ ಯಾವುದೇ ಪ್ರಕಾರದಲ್ಲಿ ಬಂದಿಲ್ಲ. ತತ್ವಪದಗಳು ಇಂದಿಗೂ ಜನಜೀವನದಲ್ಲಿ ಕನ್ನಡದ ಅಸ್ಮಿತೆಯ ಆಕಾರದಂತಿದೆ.

ವಿಸ್ತಾರ ಮತ್ತು ಮೌಲ್ಯ ದೃಷ್ಟಿಯಿಂದ ಅಚ್ಚ ಕನ್ನಡದ ಸಾಹಿತ್ಯದ ಪ್ರಕಾರವಾದ ತತ್ವಪದಗಳು ಸಾವಿರಾರು ವರ್ಷಗಳಿಂದಲೂ ಜನರ ಜೀವನದಲ್ಲಿ ಹಾಸುಹೊಕ್ಕಿದ್ದು, ಇಂದು ಪುಸ್ತಕ ರೂಪ ಪಡೆದುಕೊಂಡಿರುವುದು ಸಂತಸ ತಂದಿದೆ. ಮುಂದೆ ಮಹಿಳಾ ತತ್ವಪದಕಾರರ ಒಂದು ಸಂಪುಟವೇ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್‌.ಅರ್ಚನಾ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ, ಯೋಜನಾ ಸಂಪಾದಕ ಎಸ್‌.ನಟರಾಜ ಬೂದಾಳು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next