ಧಾರವಾಡ: ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕೆಲಸದಲ್ಲಿ ಪ್ರಾಂಶುಪಾಲರ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ| ಮಲ್ಲೇಶ್ವರಪ್ಪ ಹೇಳಿದರು.
ಸರ್ಕಾರಿ ಮತ್ತು ಅನುದಾನಿತ ಎಂಬ ಭೇದ ಭಾವ ಇರಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಅಳವಡಿಸಲು ಶಿಕ್ಷಕರು ಶ್ರಮಿಸಬೇಕು. ಅನುದಾನಿತ ಕಾಲೇಜುಗಳಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಇಂತಹ ತರಬೇತಿಗಳಲ್ಲಿ ಬಗೆಹರಿಸಲು ಸಾಧ್ಯ ಆಗಿದ್ದು, ಆಡಳಿತಾತ್ಮಕ ಸಹಾಯ ಅವಶ್ಯವಾಗಿದೆ ಎಂದರು.
ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ| ಎಸ್.ಎಂ. ಶಿವಪ್ರಸಾದ ಮಾತನಾಡಿ, ಬದಲಾವಣೆಯತ್ತ ಜಗತ್ತು ಸಾಗುತ್ತಿದೆ. ಕಾಲೇಜುಗಳು ಹಾಗೂ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ವಿದ್ಯಾರ್ಥಿಗಳಿಗೂ ಶಿಕ್ಷಣದ ಮಹತ್ವ ತಿಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯ ಮೇಲಿದೆ. ಇವತ್ತಿನ ಪೈಪೋಟಿಯ ದಿನಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ| ನೀಲಾಂಬಿಕೆ ಪಟ್ಟಣಶೆಟ್ಟಿ ಮಾತನಾಡಿ, ಬದಲಾವಣೆಗೆ ಬೇಕಾಗುವ ವ್ಯಕ್ತಿತ್ವವು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವಶ್ಯವಿದೆ. ಶಿಕ್ಷಕರಿಗೆ ಶೈಕ್ಷಣಿಕ ತರಬೇತಿ ಜೊತೆಗೆ ಪ್ರಾಂಶುಪಾಲರಿಗೂ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ತರಬೇತಿ ನೀಡಿದಲ್ಲಿ ಕಾಲೇಜುಗಳಲ್ಲಿ ಶಿಕ್ಷಣ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು.
Advertisement
ನಗರದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಜಂಟಿ ನಿರ್ದೇಶಕರ ಕಚೇರಿ ಸಹಯೋಗದಲ್ಲಿ ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಅಕ್ರಿಡಿಟೇಶನ್ ವಿಷಯಗಳ ಮೇಲೆ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಡಾ| ಎ.ಆರ್. ಜಗತಾಪ, ಗ್ರಂಥಪಾಲಕ ಡಾ| ಮಲ್ಲಿಕಾರ್ಜುನ ಮೂಲಿಮನಿ ಇದ್ದರು. ಡಾ| ಅರುಂಧತಿ ಕುಲಕರ್ಣಿ ಸ್ವಾಗತಿಸಿದರು. ಡಾ| ಐ.ಬಿ. ಸಾತೀಹಾಳ ನಿರೂಪಿಸಿದರು. ಡಾ| ಎಚ್.ಬಿ. ನೀಲಗುಂದ ವಂದಿಸಿದರು.