Advertisement
ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಹಡಗಿನ ರಂಧ್ರ ಮುಚ್ಚುವ ಯಾವುದೇ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಹಡಗಿನ ಮಾಲಕರು ನಿಯೋಜಿಸಿರುವ ಸ್ಮಿತ್ ಸಾಲ್ವೇಜ್ ಏಜೆನ್ಸಿಯವರು ಮಂಗಳೂರಿಗೆ ಗುರುವಾರ ಆಗಮಿಸಿದ್ದು ಹಡಗಿನ ಪ್ರಾಥಮಿಕ ತಪಾಸಣೆ ನಡೆಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಮಂಗಳೂರು ಸಹಾಯಕ ಆಯುಕ್ತರು ಮತ್ತು ಕೋಸ್ಟ್‌ಗಾರ್ಡ್ ಡಿಐಜಿ ಏಜೆನ್ಸಿಯವರೊಂದಿಗೆ ಹಡಗು ಮುಳುಗಿರುವ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
Related Articles
Advertisement
ತೈಲ ಸೋರಿಕೆ ತಡೆಗೆ ಸೂಚನೆ :
ನೌಕೆ ಮುಳುಗಡೆಯಾಗಿರು ವುದರಿಂದ ಅದರಲ್ಲಿದ್ದ ಅಗಾಧ ಪ್ರಮಾಣದ ತೈಲ ಸೋರಿಕೆ ಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೋಸ್ಟ್ ಗಾರ್ಡ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದೆ. ಹಡಗಿನಲ್ಲಿರುವ ಫರ್ನಸ್ ಆಯಿಲ್ ಮತ್ತು ಎಂಜಿನ್ ಆಯಿಲ್ ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್ ಗಾರ್ಡ್ ಡಿಐಜಿಗೆ ಸೂಚಿಸಲಾಯಿತು. ಈ ಹಡಗಿನ ಸುತ್ತ ಮೀನುಗಾರಿಕೆ ನಡೆಸದಂತೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.
ತೈಲ ಹೊರತೆಗೆಯುವ ಕಾರ್ಯಾಚರಣೆಗೆ ಎಂಆರ್‌ಪಿಎಲ್ ಮತ್ತು ಎನ್‌ಎಂಪಿಟಿ ಸಂಸ್ಥೆಯವರು ತಮ್ಮಲ್ಲಿರುವ ರಕ್ಷಣ ಸಾಮಗ್ರಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಒಂದು ವೇಳೆ ತೈಲ ಸೋರಿಕೆಯಾಗಿ ಸಮುದ್ರ ದಡಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರುವಂತೆ ಹಾಗೂ ಯಾವುದೇ ಕಾರಣಕ್ಕೂ ಸೋರಿಕೆಯಾಗುವ ತೈಲ ನದಿಗೆ ಸೇರದಂತೆ ಎಚ್ಚರಿಕೆ ವಹಿಸಲು ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಸ್ಟ್ ಗಾರ್ಡ್ ಡಿಐಜಿ ಅವರನ್ನು ಚೀಫ್ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ.
ಮುಳುಗಡೆಯಾದ ನೌಕೆಯಿಂದ ರಕ್ಷಿಸಲ್ಪಟ್ಟ 15 ಮಂದಿ ಸಿರಿಯಾ ಪ್ರಜೆಗಳನ್ನು ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರಕ್ಕೆ ಕಳುಹಿಸಲಾಗುವುದು. ದಿಲ್ಲಿಯ ವಿದೇಶಾಂಗ ವಿಭಾಗದ ಒಪ್ಪಿಗೆ ಬಳಿಕ ಅವರನ್ನು ಸಿರಿಯಾಕ್ಕೆ ಕಳುಹಿಸಲಾಗುತ್ತದೆ.
ತೈಲ ಸೋರಿಕೆ ತಡೆಗೆ ಬರಲಿದೆ ವಿಶೇಷ ನೌಕೆ :
ಮುಳುಗಿರುವ ಹಡಗಿನಿಂದ ಯಾವುದೇ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಕೋಸ್ಟ್‌ಗಾರ್ಡ್ ತನ್ನ ವಿಶೇಷ ನೌಕೆ ಐಸಿಜಿಎಸ್ ಸಮುದ್ರ ಪಾವಕ್‌ನ್ನು ತರಿಸಲು ಮುಂದಾಗಿದೆ. ಪ್ರಸ್ತುತ ಹಡಗಿನ ಡರ್ಟಿ ವಾಟರ್ ಟ್ಯಾಂಕ್‌ನಿಂದ ಸಣ್ಣ ಪ್ರಮಾಣದಲ್ಲಷ್ಟೇ ತೈಲ ಹೊರಬಂದಿರುವುದಾಗಿ ತಿಳಿದು ಬಂದಿದೆ. ಹಡಗಿನಲ್ಲಿ 220 ಮೆಟ್ರಿಕ್ ಟನ್ ತೈಲ ಇರುವ ಹಿನ್ನೆಲೆಯಲ್ಲಿ ದೊಡ್ಡ ಮಾಲಿನ್ಯ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. 6 ನೌಕೆಗಳು, 2 ಡೋರ್ನಿಯರ್ ವಿಮಾನಗಳನ್ನು ಅಲ್ಲದೆ ಸ್ಥಳೀಯ 2 ದೋಣಿಗಳನ್ನು ತೈಲ ಚೆಲ್ಲುವಿಕೆ ಬಗ್ಗೆ ನಿಗಾ ವಹಿಸಲು ನಿಯೋಜನೆ ಮಾಡಲಾಗಿದೆ. ತೈಲ ಚೆಲ್ಲುವಿಕೆ ತಡೆ ಕಾರ್ಯಾಚರಣೆಗೆ ಬಳಸುವ ವಿಶೇಷ ನೌಕೆ ಸಮುದ್ರ ಪಾವಕ್ ಪೋರಬಂದರ್‌ನಿಂದ ಹೊರಟಿದ್ದು ಜೂ. 25ರಂದು ಮಂಗಳೂರು ತಲಪಲಿದೆ ಎಂದು ಕೋಸ್ಟ್‌ಗಾರ್ಡ್ ತಿಳಿಸಿದೆ.