ಮಂಗಳೂರು: ಮಂಗಳೂರಿನ ಉಳ್ಳಾಲ ಬಟ್ಟಪ್ಪಾಡಿ ಅರಬಿ ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಸರಕು ಹಡಗಿನಿಂದ ತೈಲ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು ಅಳಿವೆ ಬಾಗಿಲಿನ ಬಳಿ ಆಯಿಲ್ ಬೂಮ್‌ಗಳನ್ನು ಹಾಕಲಾಗಿದೆ.
ಎಂಆರ್‌ಪಿಎಲ್ ಹಾಗೂ ಕೋಸ್ಟ್‌ಗಾರ್ಡ್‌ಗೆ ತೈಲ ಸೋರಿಕೆ ಹಾಗೂ ಜಲಮಾಲಿನ್ಯ ನಿಯಂತ್ರಣದ ಜವಾಬ್ದಾರಿ ಯನ್ನು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ವಹಿಸಿದ್ದು ಸೂಕ್ತ ರಕ್ಷಣ ಸಾಮಗ್ರಿ ಒದಗಿಸುವಂತೆ ಸೂಚನೆ ಯಿತ್ತಿದ್ದಾರೆ. ಅದರಂತೆ ಎಂಆರ್‌ಪಿಎಲ್ ಟಗ್ ನೌಕೆಯನ್ನು ಒದಗಿಸಿದ್ದು ಯೋಜಕ ಸಂಸ್ಥೆಯವರನ್ನು ನಿಯೋಜಿಸಿದೆ.
ಕೋಸ್ಟ್‌ಗಾರ್ಡ್‌ನವರು ತಮ್ಮ ಎರಡು ನೌಕೆಗಳನ್ನು ಕೂಡ ತೈಲಸೋರಿಕೆ ಮೇಲೆ ನಿಗಾ ಇರಿಸುವುದಕ್ಕೆ ನಿಯೋಜನೆ ಮಾಡಿದ್ದು ಅವರೂ ಕಾರ್ಯೋನ್ಮುಖರಾಗಿದ್ದಾರೆ. ಮುಳುಗಿದ ಹಡಗಿನಲ್ಲಿ 220 ಮೆಟ್ರಿಕ್ ಟನ್‌ನಷ್ಟು ತೈಲ ಹಾಗೂ ಫರ್ನೆಸ್ ತೈಲವಿದ್ದು ಅದು ಸೋರಿಕೆಯಾಗಿ ಅಳಿವೆ ಬಾಗಿಲಿನಿಂದ ಒಳಕ್ಕೆ ನೇತ್ರಾವತಿ ನದಿ ಕಡೆಗೆ ಬಾರದಂತೆ ಬೂಮ್‌ಗಳನ್ನು ಹಾಕುವ ಕೆಲಸ ಕೈಗೊಳ್ಳಲಾಗಿದೆ.
ಮುಳುಗಿರುವ ಹಡಗಿನ ಸುತ್ತಳತೆ ಸುಮಾರು 100 ಮೀಟರ್ ಇದ್ದು, ಅದರ ಸುತ್ತಲೂ ಬೂಮ್‌ಗಳನ್ನು ಹಾಕಲಾಗಿದೆ, ಆದರೆ ಸಮುದ್ರ ಪ್ರಕ್ಷುಬ್ದವಾಗಿದ್ದು ಅದರ ನಿರ್ವಹಣೆ ಕೋಸ್ಟ್‌ಗಾರ್ಡ್‌ನವರಿಗೆ ಸವಾಲಾಗಿ ಪರಿಣಮಿಸಿದೆ. ಹಡಗಿನಲ್ಲಿರುವ ಫರ್ನೆಸ್ ಆಯಿಲ್ ಎಲ್ಲಾದರೂ ಸಮುದ್ರದ ಅಬ್ಬರದಲ್ಲಿ ಸೋರಿಕೆಯಾದರೆ ನಿರ್ವಹಣೆ ಕಷ್ಟವಾಗುವ ಭೀತಿಯೂ ಇದೆ.
ಮುಳುಗಡೆಯಾದ ನೌಕೆಯಿಂದ ರಕ್ಷಿಸಲ್ಪಟ್ಟಿರುವ 15 ಮಂದಿ ಸಿರಿಯನ್ ನಾವಿಕರು ಇನ್ನೂ ನವಮಂಗಳೂರು ಬಂದರು ಪ್ರಾಧಿಕಾರದವರ ಆಶ್ರಯದಲ್ಲಿದ್ದಾರೆ. ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳ ತಾತ್ಕಾಲಿಕ ಆಶ್ರಿತ ಕೇಂದ್ರ ಸದ್ಯ ಭರ್ತಿಯಾಗಿರುವುದರಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಯೋಜಿಸಲಾಗುತ್ತಿದೆ.
ಹಡಗಿನವರು ಇದುವರೆಗೆ ತಮ್ಮ ಅಧಿಕೃತ ಏಜೆನ್ಸಿಯವರನ್ನು ನಿಯೋಜನೆ ಮಾಡಿಲ್ಲ, ಹಡಗು ಹಳೆಯದಾಗಿದ್ದು ಅದಕ್ಕೆ ಸೂಕ್ತ ದಾಖಲೆಗಳು, ವಿಮೆ ಇದೆಯೋ ಎನ್ನುವುದರ ಪರಿಶೀಲನೆಯಾಗಬೇಕಿದೆ, ಏನಿದ್ದರೂ ತೈಲವನ್ನು ನಮ್ಮ ವತಿಯಿಂದಾದರೂ ತೆರವು ಮಾಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಡಾ| ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ.