Advertisement

ಆರ್ಥಿಕತೆ ಬಲವರ್ಧನೆಗೆ ರಂಗಕ್ಕಿಳಿದ ಪ್ರಧಾನಿ ಕಚೇರಿ

10:32 AM Oct 15, 2019 | Team Udayavani |

ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈಗ ಖುದ್ದು ಪ್ರಧಾನ ಮಂತ್ರಿ ಕಚೇರಿಯೇ ರಂಗಕ್ಕೆ ಇಳಿದಿದೆ. ಹೀಗಾಗಿ ಕೇಂದ್ರ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ವಿವಿಧ ರಾಜ್ಯ ಸರಕಾರಗಳೊಂದಿಗೆ ಸರಣಿ ಸಭೆಗಳನ್ನು ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಗಳು ನಡೆಸಿದ್ದು, ಶೀಘ್ರದಲ್ಲಿಯೇ ಮತ್ತೂಂದು ಸುತ್ತಿನ ಉತ್ತೇಜನ ಕ್ರಮ ಘೋಷಣೆಯಾಗುವ ಸಾಧ್ಯತೆ ಇದೆ. ಆಡಳಿತಾತ್ಮಕ ಮತ್ತು ಆರ್ಥಿಕ ಕ್ಷೇತ್ರಕ್ಕೆ ಚೇತೋಹಾರಿ ಕ್ರಮಗಳನ್ನು ಯಾವ ರೀತಿಯಲ್ಲಿ ಪ್ರಕಟಿಸಬೇಕು ಎಂಬ ಬಗ್ಗೆ ಚಿಂತನ-ಮಂಥನ ನಡೆಸಲಾಗುತ್ತಿದೆ.

Advertisement

ಕೆಲವು ದಿನಗಳ ಹಿಂದಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಾರ್ಪೊರೆಟ್‌ ತೆರಿಗೆ ಪ್ರಮಾಣದಲ್ಲಿ ಇಳಿಕೆ, ರಫ್ತು ಕ್ಷೇತ್ರಕ್ಕೆ ಉತ್ತೇಜನವಾಗುವ ಕ್ರಮಗಳ ಘೋಷಣೆಯಿಂದ ಮುಂಬಯಿ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ ಪುಟಿದೆದ್ದಿತ್ತು.

ಇದರ ಹೊರತಾಗಿಯೂ ಜಿಎಸ್‌ಟಿ ಸಂಗ್ರಹಣೆಯಲ್ಲಿ 19 ತಿಂಗಳ ಕನಿಷ್ಠಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣ ವಾಗಿದೆ. ಹೀಗಾಗಿ ಪ್ರಧಾನಿ ಕಾರ್ಯಾಲಯವೇ ವಿತ್ತ ಖಾತೆಯ ಅಧಿಕಾರಿಗಳು ಮತ್ತು ರಾಜ್ಯ ಸರಕಾರ ಗಳ ಜತೆಗೆ ಸಮಾಲೋಚನೆಗೆ ಮುಂದಾಗಿದೆ ಎನ್ನಲಾಗಿದೆ.

ಹಿರಿಯ ಅಧಿಕಾರಿ ಹೇಳುವ ಪ್ರಕಾರ ಕೇಂದ್ರ ಬೊಕ್ಕಸಕ್ಕೆ 1.45 ಲಕ್ಷ ಕೋಟಿ ರೂ. ಖೋತಾ ಉಂಟಾಗಲಿದ್ದರೂ ಕಾರ್ಪೊರೆಟ್‌ ತೆರಿಗೆ ಪ್ರಮಾಣವನ್ನು ಶೇ.22ಕ್ಕೆ ಇಳಿಕೆ ಮಾಡಲಾಗಿದೆ. ವಿವಿಧ ವಸ್ತುಗಳಿಗೆ ಬೇಡಿಕೆ ಕುದು ರಿಸುವುದು ಮತ್ತು ಬಳಕೆಯ ಪ್ರಮಾಣವನ್ನು ಹೇಗೆ ಹೆಚ್ಚು ಮಾಡುವುದು ಎಂಬುದೇ ಸರಕಾರದ ಮುಂದಿರುವ ಸವಾಲು ಆಗಿದೆ ಎಂದಿದ್ದಾರೆ.

ಬೆಳವಣಿಗೆ ದರ ತಗ್ಗಿಸಿದ ವಿಶ್ವಬ್ಯಾಂಕ್‌
ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವನ್ನು ನಿರೀಕ್ಷಿತ ಶೇ.7.2ರಿಂದ ಶೇ.6ಕ್ಕೆ ಇಳಿಕೆ ಮಾಡಲಾಗಿದೆ ಎಂದು ವಿಶ್ವಬ್ಯಾಂಕ್‌ ಪ್ರಕಟಿಸಿದೆ. 2021ರಲ್ಲಿ ಅದು ಶೇ.6.9, 2022ರಲ್ಲಿ ಶೇ.7.2ಕ್ಕೆ ಜಿಗಿಯಲಿದೆ ಎಂದು ತಿಳಿಸಿದೆ. ಎಪ್ರಿಲ್‌ನಲ್ಲಿ ಪ್ರಕಟಿಸಲಾಗಿದ್ದ ವರದಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಭದ್ರವಾಗಿದೆ ಮತ್ತು ಅಭಿವೃದ್ಧಿ ದರ ಶೇ.7.5ರಷ್ಟಾಗಲಿದೆ ಎಂದು ಉಲ್ಲೇಖೀಸಿತ್ತು. ಈಗಲೂ ಭಾರತದ ಅರ್ಥ ವ್ಯವಸ್ಥೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂದು ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕ ಸಲಹೆಗಾರ ಟ್ರಿಮ್ಮರ್‌ ಹೇಳಿದ್ದಾರೆ.

Advertisement

ಬ್ಯಾಂಕ್‌ ಸಿಇಒಗಳ ಜತೆ ಇಂದು ಸಭೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಇಒಗಳ ಜತೆಗೆ ಸೋಮವಾರ ಸಭೆ ನಡೆಸಲಿದ್ದಾರೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿತ್ತೀಯ ನೆರವು ನೀಡುವಲ್ಲಿನ ಪ್ರಗತಿ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುತ್ತದೆ. ಮಾರುಕಟ್ಟೆಯಿಂದ ನಿಧಿ ಸಂಗ್ರಹ, ಆಂಶಿಕ ಸಾಲ ಖಾತರಿ ಯೋಜನೆ ಅನುಷ್ಠಾನದಲ್ಲಿ ಯಾವ ರೀತಿಯಲ್ಲಿ ಪ್ರಗತಿ ಉಂಟಾಗಿದೆ ಎಂಬ ಬಗ್ಗೆ ಸಿಇಒಗಳು ವಿತ್ತ ಸಚಿವರಿಗೆ ವರದಿ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next