ಬೆಂಗಳೂರು: ನಗರದಲ್ಲಿ ಮಳೆಹಾನಿಯಿಂದ ಸಂತ್ರಸ್ತರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆ.17ರಂದು ಅಕ್ಕಿ ವಿತರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಅದರ ಅಂಗವಾಗಿ ಪ್ರವಾಹ ಸಂತ್ರಸ್ತರಿಗೆ ಅಕ್ಕಿ ವಿತರಿಸಲಾಗುವುದು. ಅದಕ್ಕಾಗಿ ಸುಮಾರು 2000 ಕುಟುಂಬಗಳನ್ನು ಪಟ್ಟಿ ಮಾಡಲಾಗಿದೆ. ಅಂದು ಸಾಂಕೇತಿಕವಾಗಿ ಅಕ್ಕಿ ವಿತರಿಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ, ಮಳೆಯಿಂದ ತೊಂದರೆಗೊಳಗಾದವರಿಗೆ ಪಕ್ಷ ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ. ಈಗಾಗಲೇ ನಗರದ ಶಾಸಕರು, ಸಂಸದರಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಹೆಚ್ಚು ಅನಾಹುತ ಸಂಭವಿಸಿದೆಯೋ ಅಲ್ಲೆಲ್ಲಾ ವಿಶೇಷ ಗಮನ ನೀಡಿ ಜನರಿಗೆ ಸ್ಪಂದಿಸುವಂತೆ ತಿಳಿಸಲಾಗಿದೆ ಎಂದರು.
ಇದೇ ವೇಳೆ ಪ್ರವಾಹಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು, ನಗರದ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಸಮರ್ಥತೆ ಮತ್ತು ಕೆಟ್ಟ ನಿರ್ವಹಣೆಗೆ ಬೆಂಗಳೂರಿನ ನಾಗರಿಕರು ಬೆಲೆ ತೆತ್ತಿದ್ದು ಸಾಕು. ಇನ್ನಾದರೂ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಸಾವಿರಾರು ಜನರ ಬದುಕು ಬೀದಿಗೆ ಬಂದಿದ್ದು, ಅನೇಕ ಪ್ರಾಣಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ಸಮಸ್ಯೆ ಎದುರಾಗಿದ್ದರೂ ಹೆಚ್ಚಿನ ಅನಾಹುತಕ್ಕೆ ಸರ್ಕಾರ ಮತ್ತು ಉಸ್ತುವಾರಿ ಸಚಿವ ಜಾರ್ಜ್ ಹೊಣೆಯಾಗಿದ್ದಾರೆ ಎಂದರು.
ಬೆಂಗಳೂರು ನಗರದಲ್ಲಿ ಹೂಳು ತೆಗೆಯಲು, ರಾಜಕಾಲುವೆ ನಿರ್ಮಾಣಕ್ಕೆ 702 ಕೋಟಿ ರೂ., ರಸ್ತೆ ಹೊಂಡ ಮುಚ್ಚಲು ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ 900 ಕೋಟಿ ರೂ. ಖರ್ಚು ಮಾಡಲಾಗಿದೆ. ದುರಸ್ತಿಗೆ ಇನ್ನೂ 300 ಕೋಟಿ ರೂ. ಬೇಕು ಎಂದು ಸಚಿವರು ಹೇಳುತ್ತಿದ್ದಾರೆ.
ಹಾಗಿದ್ದರೆ ಈ ಹಿಂದೆ ಏಕೆ ಗುಣಮಟ್ಟದ ಕಾಮಗಾರಿ ನಡೆಸಿಲ್ಲ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಬೆಂಗಳೂರಿನಲ್ಲಿ ನ್ಯೂಯಾರ್ಕ್‌ಗಿಂತಲೂ ಉತ್ತಮವಾಗಿ ಪ್ರವಾಹ ನಿರ್ವಹಣೆಗೆ ಸಜ್ಜಾಗಿದ್ದೇವೆ ಎಂಬ ಸಚಿವರ ಹೇಳಿಕೆಯೇ ಹಾಸ್ಯಾಸ್ಪದ ಎಂದು ಹೇಳಿದರು. ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಕಡೆ ಕೂಡ ಹೋಗಿ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.