Advertisement

ಪ್ರಧಾನಿ 15 ಲಕ್ಷ ಆಶ್ವಾಸನೆ ಆರೋಪ: ಗದ್ದಲ

10:24 PM Jul 13, 2023 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಮತದಾರರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಕೊಡುತ್ತೇನೆಂದು ಹೇಳಿರುವುದನ್ನು ಕಾಂಗ್ರೆಸ್‌ನವರು ಸಾಕ್ಷ್ಯಸಮೇತ ನಿರೂಪಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ.

Advertisement

ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕ ಕೋನರೆಡ್ಡಿ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮತದಾರರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿದ್ದರು. ಆದರೆ ಹಾಕಲಿಲ್ಲ. ನೀವು ಗ್ಯಾರಂಟಿ ಜಾರಿಗೆ ಆಗ್ರಹಿಸುವುದಕ್ಕೆ ಮುನ್ನ ಈ ಬಗ್ಗೆಯೂ ಮಾತನಾಡಿ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್‌, ಕಾಂಗ್ರೆಸ್‌ನವರು ಪದೇ ಪದೆ ಈ ವಿಚಾರ ಪ್ರಸ್ತಾವಿಸುತ್ತಿದ್ದೀರಿ. ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡುವುದಕ್ಕೆ ನಿಮಗೆ ಯಾವುದೇ ವಿಷಯ ಸಿಗುತ್ತಿಲ್ಲ. ಪ್ರಧಾನಿ ಈ ರೀತಿ ಭರವಸೆ ಕೊಟ್ಟ ಬಗ್ಗೆ ಒಂದೇ ಒಂದು ದಾಖಲೆ ಕೊಡಿ. ಇಲ್ಲವಾದರೆ ಸರಿ ಯಾಗಿ ಹಿಂದಿ ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ.
ಒಂದೇ ಸುಳ್ಳನ್ನು ಎಷ್ಟು ಬಾರಿ ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಸಂಬಂಧಪಟ್ಟಂತೆ ಒಂದಾದರೂ ವೀಡಿಯೋ ನಿಮ್ಮ ಬಳಿ ಇದೆಯೇ? ಇದ್ದರೆ ಕೊಡಿ. ನಾನೇ ಹೋಗಿ ಪ್ರಧಾನಿಯವರನ್ನು ಕೇಳಿ ಬರುತ್ತೇನೆ. ಅಷ್ಟರಮಟ್ಟಿಗೆ ಬಿಜೆಪಿಯಲ್ಲಿ ಪ್ರಜಾತಂತ್ರ ಇದೆ. ನಿಮ್ಮ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆಂದು ಸವಾಲು ಹಾಕಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌ನ ಪ್ರಸಾದ್‌ ಅಬ್ಬಯ್ಯ, ಮೊದಲು ನಮ್ಮ ಪಾಲಿನ ಜಿಎಸ್‌ಟಿ ಹಣ ಕೊಡಿಸಿ ಎಂದು ತಿವಿದರು.

ದಾಖಲೆ ಇಲ್ಲದೇ ಮಾತನಾಡಬೇಡಿ ಎಂದು ಯಶಪಾಲ್‌ ಸುವರ್ಣ ಆಗ್ರಹಿಸಿದಾಗ ಸಿಟ್ಟಿಗೆದ್ದ ಕೋನರೆಡ್ಡಿ ನಾನು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇನೆ. ನಿಮ್ಮಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಾನು ಹೇಗೆ ಮಾತನಾಡಬೇಕೆಂದು ನಿಮ್ಮಿಂದ ಕಲಿತುಕೊಳ್ಳಬೇಕಿಲ್ಲ. ನೀವು ಮೊದಲ ಬಾರಿಗೆ ಗೆದ್ದವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಕೂಡ ಚುನಾವಣೆಯಲ್ಲಿ ಹೋರಾಟ ಮಾಡಿಯೇ ಗೆದ್ದವರು ಎಂದು ಯಶಪಾಲ್‌ ತಿರುಗೇಟು ನೀಡಿದರು.

ಈ ಜಗಳದಿಂದ ಬೇಸತ್ತ ಸ್ಪೀಕರ್‌ ಖಾದರ್‌, ಕೋನರೆಡ್ಡಿಯವರೇ ನನ್ನನ್ನು ನೋಡಿಕೊಂಡು ಮಾತನಾಡಿ ಎಂದರೆ ನೀವು ಊರಿಡಿ ನೋಡಿಕೊಂಡು ಜಗಳ ಮಾಡುತ್ತೀರಿ. ಈ ಸದನದಲ್ಲಿ ಸ್ಪೀಕರ್‌ ಅನ್ನು ಎತ್ತರದ ಪೀಠದಲ್ಲಿ ಕುಳ್ಳಿರಿಸಿರುವುದು ಯಾಕೆ? ಸದಸ್ಯರು ನನ್ನ ಮುಖ ನೋಡಿ ಮಾತನಾಡಲಿ ಎಂದಲ್ಲವೇ? ನೀವು ವಿಪಕ್ಷದವರಿಗೆ ಸಲಹೆ ಕೊಡಲು ಹೋಗಬೇಡಿ. ಅದಕ್ಕೆ ಅವರು ಅಲ್ಲಿ ಕುಳಿತಿದ್ದಾರೆ ಎಂದು ವಾಗ್ವಾದಕ್ಕೆ ತೆರೆ ಎಳೆದರು.

Advertisement

ಹಕ್ಕುಚ್ಯುತಿ ಮಂಡಿಸುತ್ತೇವೆ: ಅಶ್ವತ್ಥನಾರಾಯಣ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಮತ್ತೆ ಹದಿನೈದು ಲಕ್ಷದ ಭರವಸೆ ಪ್ರಸ್ತಾವಿಸಿದಾಗ ಗದ್ದಲ ಪ್ರಾರಂಭವಾಯಿತು. ತಾಳ್ಮೆ ಕಳೆದುಕೊಂಡ ಡಾ| ಅಶ್ವತ್ಥನಾರಾಯಣ, ಒಬ್ಬ ಸಚಿವರಾಗಿ ನೀವು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ನಿಮ್ಮ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಗಮ್ಮತ್ತಾಯ್ತಲ್ಲ ಮಾರಾಯರೇ
ಈ ಹಂತದಲ್ಲಿ ಬಿಜೆಪಿಯ ಕರಾವಳಿ ಭಾಗದ ಶಾಸಕರಾದ ಡಾ| ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌, ಉಮಾನಾಥ್‌ ಕೋಟ್ಯಾನ್‌, ಯಶಪಾಲ್‌ ಸುವರ್ಣ ಎದ್ದುನಿಂತು “ಪ್ರಧಾನಿ ಹೇಳಿಕೆ ಬಗ್ಗೆ ದಾಖಲೆ ಕೊಡಿ, ಸಭಾಧ್ಯಕ್ಷರೇ ನೀವು ದಾಖಲೆ ಕೊಡಿಸಿ’ ಎಂದು ಪಟ್ಟು ಹಿಡಿದರು. ಇದರಿಂದ ಕಿರಿಕಿರಿಗೊಂಡ ಸ್ಪೀಕರ್‌ ಯು.ಟಿ.ಖಾದರ್‌, “ಇದೊಳ್ಳೆ ಗಮ್ಮತ್ತಾಯ್ತಲ್ಲ ಮಾರಾಯರೇ, ನಾನು ಎಲ್ಲಿಂದ ದಾಖಲೆ ತಂದು ಕೊಡಲಿ’ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದ ಸಚಿವ ಕೆ.ಜೆ.ಜಾರ್ಜ್‌, ಸ್ವಿಸ್‌ ಬ್ಯಾಂಕ್‌ನಲ್ಲಿಟ್ಟ ಕಪ್ಪು ಹಣ ತರುತ್ತೇನೆಂದು ಭರವಸೆ ಕೊಟ್ಟಿರಲಿಲ್ಲವೇ? ಒಂಬತ್ತು ವರ್ಷವಾಯ್ತು ಎಲ್ಲಿಗೆ ಬಂತು ಕಪ್ಪು ಹಣ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next