Advertisement
ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಗುರುವಾರ ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದು, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಬಳಿಕ ಕಾರ್ಗಿಲ್‌ಗೆ ತೆರಳಿದ ಅವರು ಅಲ್ಲಿಯೂ ಎಲ್ಲ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ಮಾಜಿ ಲೆ| ಕ| ಬಾರ್ಷಾ ರೈ ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ 4 ದಿನಗಳಲ್ಲಿ ಶ್ರೀನಗರದಿಂದ ದ್ರಾಸ್‌ವರೆಗೆ 160 ಕಿ.ಮೀ. ಓಡಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ನಾನು ಓಡಿದ್ದೇನೆ ಎಂದು ಹೇಳಿದ್ದಾರೆ. ಅವರ ಪತಿಯೂ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜು.19ರಂದು ಶ್ರೀನಗರದಿಂದ ಓಟ ಆರಂಭಿಸಿದ ರೈ ಜು.22ಕ್ಕೆ ದ್ರಾಸ್ ಸೆಕ್ಟರ್‌ನ ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಕೊನೆಗೊಳಿಸಿದ್ದಾರೆ. ವಾಯುಪಡೆಯಿಂದ ವಿಶೇಷ ಕಾರ್ಯಕ್ರಮ
ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾರತೀಯ ವಾಯುಪಡೆಯ 29 “ಅಗ್ನಿವೀರವಾಯು’ ಮಹಿಳೆಯರು ಮೊದಲ ಮಹಿಳಾ ಡ್ರಿಲ್ ತಂಡ ಮಾಡಿ ಇಂಡಿಯಾ ಗೇಟ್ ಎದುರು ಪ್ರದರ್ಶನ ನೀಡಲಿದ್ದಾರೆ. ಜತೆಗೆ ಆಕಾಶ ಗಂಗಾ ತಂಡದಿಂದ ಏರ್ ಶೋ ನಡೆಯಲಿದ್ದು, ಜಾಗ್ವಾರ್, ಸುಖೋಯ್-30 ಹಾಗೂ ರಾಫೆಲ್ ಯುದ್ಧವಿಮಾನಗಳು ಪ್ರದರ್ಶನ ನೀಡಲಿವೆ. ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಸಲು ವಾಯುಪಡೆಯು ಜು.12 ರಿಂದ 26ರ ವರೆಗೆ ಸರ್ಸಾವ ವಾಯುನೆಲೆಯಲ್ಲಿ “ಕಾರ್ಗಿಲ್ ವಿಜಯ ದಿವಸ್ ರಜತ ಜಯಂತಿ’ ಆಚರಿಸುತ್ತಿದೆ. ದೇಶದ ವಿವಿಧೆಡೆ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿಹಬ್ಬಕ್ಕೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.