ದಿಲ್ಲಿಯಲ್ಲಿ ನಡೆದ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಯಡಿ ಜಾರಿಗೊಳಿಸಲಾಗಿದ್ದ ಕೇಂದ್ರದ ವಿವಿಧ ಯೋಜನೆಗಳ ಪರಾಮರ್ಶೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಆಡಳಿತಾತ್ಮಕ ವಿಭಾಗದ ಅಧಿಕಾರಿಗಳ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ. ಯೋಜನೆಗಳನ್ನು ಜನರ ಬಳಿಗೆ ತಲುಪಿಸಲು ವಿಫಲರಾದ ಅಥವಾ ಯೋಜನೆಗಳ ಅನುಷ್ಠಾನವನ್ನು ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಪ್ರಧಾನಿ ಅಸಮಾಧಾನಗೊಂಡಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ಮೋದಿ ಯಾರ ವಿರುದ್ಧವೂ ನೇರವಾಗಿ ದೋಷಾರೋಪ ಹೊರಿಸುವ ಸ್ವಭಾವದವರಲ್ಲ. ಅವರದ್ದೇನಿದ್ದರೂ ಪರೋಕ್ಷವಾಗಿ ತಾಕೀತು ಮಾಡುವ ಶೈಲಿ. ಆದರೆ ಈ ಸಲ ಉನ್ನತ ಅಧಿಕಾರಿಗಳನ್ನು ಅವರ ಸಮ್ಮುಖ ದಲ್ಲೇ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದಾದರೆ ಅಧಿಕಾರಿಗಳ ಬಗ್ಗೆ ಅವರಿಗೆ ಭ್ರಮನಿರಸನವಾಗಿದೆ ಎಂದೇ ಅರ್ಥ. ನನ್ನ ಆಡಳಿತಾವಧಿಯ ಐದು ವರ್ಷವನ್ನು ನೀವು ವ್ಯರ್ಥಗೊಳಿಸಿದ್ದೀರಿ ಎಂದು ಅವರು ಹೇಳಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐಎಎಸ್, ಐಪಿಎಸ್, ಐಎಫ್ಎಸ್ ದರ್ಜೆಯನ್ನೊಳಗೊಂಡಿರುವ ಅಧಿಕಾರಶಾಹಿ ವಲಯದಲ್ಲಿ ಒಂದಷ್ಟು ದಕ್ಷತೆ ಮೂಡಿದೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಮೊದಲೆಲ್ಲ ಮನಸು ಬಂದಾಗ ಕಚೇರಿ ಬಂದು ಹೋಗುತ್ತಿದ್ದವರು ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಬೇಕಾಯಿತು. ಅಂತೆಯೇ ಅಧಿಕಾರಿಗಳು ಕಾಲಕಾಲಕ್ಕೆ ತಮ್ಮ ಪ್ರಗತಿಯ ವರದಿಯನ್ನು ಒಪ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಅಧಿಕಾರಿಗಳ ಸಾಮರ್ಥ್ಯ, ಕಾರ್ಯಕ್ಷಮತೆ, ಪ್ರತಿಭೆ ಇತ್ಯಾದಿ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುವ ನಿರ್ಧಾರವನ್ನೂ ಸರಕಾರ ಕೈಗೊಂಡಿತ್ತು. ಜೊತೆಗೆ ಖಾಸಗಿ ವಲಯದ ಪ್ರತಿಭಾವಂತರನ್ನು ಕರಾರಿನ ನೆಲೆಯಲ್ಲಿ ಸರಕಾರಿ ಸೇವೆಗಳಿಗೆ ನೇಮಿಸುವ ಪರಿಪಾಠವನ್ನೂ ಪ್ರಾರಂಭಿಸಲಾಯಿತು. ಇದರ ಹೊರತಾಗಿಯೂ ಸರಕಾರಕ್ಕೆ ಅಧಿಕಾರಿಗಳ ಕಾರ್ಯನಿರ್ವಹಣೆ ತೃಪ್ತಿ ತಂದಿಲ್ಲ ಎನ್ನುವುದಾದರೆ ಈ ವ್ಯವಸ್ಥೆಯಲ್ಲೇ ಲೋಪ ಇದೆ ಎಂದಾಗುತ್ತದೆ.
ನಮ್ಮ ಅಧಿಕಾರಶಾಹಿ ಬ್ರಿಟಿಷರ ಬಿಟ್ಟು ಹೋಗಿರುವ ಪಳೆಯುಳಿಕೆ ಎನ್ನುವ ಮಾತಿನಲ್ಲಿ ಹುರುಳಿದೆ. ಈಗಲೂ ಅದೇ ಪುರಾತನ ಕಾನೂನು ಮತ್ತು ಪದ್ಧತಿಯ ಆಧಾರದಲ್ಲಿ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ಕುಂದುಕೊರತೆಗಳು ವ್ಯವಸ್ಥೆಯಲ್ಲಿ ಇವೆ. ಆದರೆ ಇದೇ ವ್ಯವಸ್ಥೆಯಲ್ಲೇ ದುಡಿದ ಅನೇಕ ಉನ್ನತ ಅಧಿಕಾರಿಗಳು ತಮ್ಮ ಛಾಪು ಮೂಡಿಸಿ ಹೋಗಿರುವುದನ್ನು ಮರೆಯಬಾರದು. ಟಿ.ಎನ್.ಶೇಷನ್ ಅವರಂಥ ಅಧಿಕಾರಿಯನ್ನು ಈ ದೇಶ ಇನ್ನೊಂದು ಶತಮಾನ ಕಳೆದರೂ ಮರೆಯುವುದಿಲ್ಲ. ಹೀಗಿರುವಾಗ ಸಂಪೂರ್ಣವಾಗಿ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ.
ಸರ್ದಾರ್ ಪಟೇಲರು ಅಧಿಕಾರಶಾಹಿಯನ್ನು ದೇಶದ ಉಕ್ಕಿನ ಕವಚ ಎಂದು ಬಣ್ಣಿಸಿದ್ದರು. ಈ ಉಕ್ಕಿನ ಕವಚ ಉಕ್ಕಿನ ಬೋನು ಆಗದಂತೆ ನೋಡಿಕೊಳ್ಳುವಲ್ಲಿ ಸರಕಾರವನ್ನು ನಡೆಸುವವರ ಪಾಲೂ ಇದೆ. ಹಾಗೆಂದು ಅಧಿಕಾರಶಾಹಿಯಲ್ಲಿ ಇರುವವರೆಲ್ಲ ಸಾಚಾ ಎಂದು ಹೇಳುವಂತಿಲ್ಲ. ಸಾಕಷ್ಟು ಭ್ರಷ್ಟರು, ಲಾಬಿಗಾರರು, ಲಂಚಕೋರರು ಇಲ್ಲಿ ಇದ್ದಾರೆ. ಹಾಗೆಂದು ಇವರು ಬರೀ ಅಧಿಕಾರಶಾಹಿಯೊಳಗೆ ಮಾತ್ರವಲ್ಲ ಎಲ್ಲಾ ಕಡೆ ಇದ್ದಾರೆ. ಖಾಸಗಿ ಕಾರ್ಪೋರೇಟ್ ವಲಯವೂ ಇದಕ್ಕೆ ಹೊರತಾಗಿಲ್ಲ. ಇರುವುದರಲ್ಲೇ ಉತ್ತಮ ಅಧಿಕಾರಿಗಳನ್ನು ಆಯ್ದುಕೊಂಡು ಅವರ ಅನುಭವ, ಪ್ರತಿಭೆಯನ್ನು ಜನರ ಒಳಿತಿಗಾಗಿ ಬಳಸುವ ವಾತಾವರಣವನ್ನು ಆಳುವವರು ಸೃಷ್ಟಿಸಬೇಕು. ಮುಖ್ಯವಾಗಿ ತಮ್ಮ ಮರ್ಜಿಗೆ ಸರಿಯಾಗಿ ಕುಣಿಯದ ಅಧಿಕಾರಿಗಳನ್ನು ಪದೇ ಪದೇ ವರ್ಗಾಯಿಸಿ ಕಿರುಕುಳ ನೀಡುವಂಥ ಅಭ್ಯಾಸವನ್ನು ಅಧಿಕಾರದಲ್ಲಿ ರುವವರು ಬಿಡಬೇಕು. ಓರ್ವ ಐಎಎಸ್ ಅಧಿಕಾರಿ ತನ್ನ ಸೇವಾ ಅವಧಿಯಲ್ಲಿ 40ಕ್ಕೂ ಹೆಚ್ಚು ಸಲ ವರ್ಗಾವಣೆಯಾಗುತ್ತಾರೆ ಎನ್ನುವುದಾದರೆ ತಪ್ಪು ಬರೀ ಅಧಿಕಾರಿ ವಲಯದಲ್ಲಿ ಮಾತ್ರ ಇರುವುದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಜಡ್ಡುಗಟ್ಟಿರುವ ಅಧಿಕಾರಿಗಳಿಗೆ ಚುರುಕುಮುಟ್ಟಿಸುವ ಕೆಲಸ ಆಗಬೇಕು ಹಾಗೂ ಇದೇ ವೇಳೆ ಅವರಿಗೆ ಮುಕ್ತವಾಗಿ ಕಾರ್ಯ ನಿರ್ವಹಿಸುವ ವಾತಾ ವರಣ ವನ್ನೂ ಕಲ್ಪಿಸಿಕೊಡಬೇಕು. ಅವರ ಸಾಮರ್ಥ್ಯವನ್ನು ಮೇಲ್ದರ್ಜೆ ಗೇರಿಸುವಂಥ ಕೆಲಸವನ್ನು ಕಾಲಕಾಲಕ್ಕೆ ಮಾಡಬೇಕು. 21ನೇ ಶತಮಾನದ ಆರ್ಥಿಕತೆಯನ್ನು 19ನೇ ಶತಮಾನದ ಮನೋಧರ್ಮ ಹೊಂದಿರುವ ಅಧಿಕಾರಶಾಹಿಯನ್ನು ಮತ್ತು 18ನೇ ಶತಮಾನದ ಕಾನೂನುಗಳನ್ನು ಇಟ್ಟುಕೊಂಡು ಮುನ್ನಡೆಸುವುದು ಅಸಾಧ್ಯ.