Advertisement

ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

11:43 AM Apr 01, 2023 | Team Udayavani |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಏ.9ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ ಅರಣ್ಯ ಇಲಾಖೆ ಸಾಕಷ್ಟು ತಯಾರಿ ನಡೆಸುತ್ತಿದ್ದು, ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಹೆಲಿಪ್ಯಾಡ್‌ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಬಂಡೀಪುರ 50 ವರ್ಷ ಪೂರೈಸಿರುವ ಹಿನ್ನೆಲೆ ಏ.9ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ವೇಳೆ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿರುವ ಸಾಧ್ಯತೆ ಇದೆ.

13 ಕಿ.ಮೀ. ಸಫಾರಿ: ಮೈಸೂರಿನಲ್ಲಿ ನಡೆಯುವ ಪ್ರಾಜೆಕ್ಟ್ ಟೈಗರ್‌ ಸುವರ್ಣ ಮಹೋತ್ಸವ ಕಾರ್ಯಕ್ರಮ ಮುಗಿಸಿ ನೇರವಾಗಿ ಬಂಡೀಪುರಕ್ಕೆ ನರೇಂದ್ರ ಮೋದಿ ಬರಲಿದ್ದು, ಸುಮಾರು 13 ಕಿ.ಮೀ. ಸಫಾರಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಈಗಾಗಲೇ ಸಿದ್ಧತೆ ನಡೆಸುತ್ತಿದ್ದು, ಬಂಡೀಪುರ ಹೋಗುವ ಮಾರ್ಗ ಮಧ್ಯೆಯ ಸಫಾರಿ ಕೇಂದ್ರ ಹಾಗೂ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ.

ಐಜಿಪಿ-ಡಿಸಿಯಿಂದ ಹೆಲಿಪ್ಯಾಡ್‌ ನಿರ್ಮಾಣ ಸ್ಥಳ ಪರಿಶೀಲನೆ: ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಮೂರು ಹೆಲಿಕ್ಯಾಪ್ಟರ್‌ ಇಳಿಯಲು ಹೆಲಿಪ್ಯಾಡ್‌ ನಿರ್ಮಾಣ ಮಾಡಲು ಉದ್ಧೇಶಿಸಿರುವ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್‌ ಮಧುಕರ್‌ ಪವರ್‌, ಜಿಲ್ಲಾಧಿಕಾರಿ ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಪದ್ಮಿನಿ ಸಾಹೋ, ತಹಸೀಲ್ದಾರ್‌ ಮಲ್ಲಿಕಾರ್ಜುನ್‌ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಭದ್ರತೆ ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ.

ಆನೆ ಉಳಿಸಿದವರಿಗೆ ಸ್ಮರಣಿಕೆ?: ಫೆ.14ರಂದು ಓಂಕಾರ ಅರಣ್ಯದ ನಾಗಾಪಟ್ಟಣದ ಬಳಿಯ ಜಮೀನೊಂದಕ್ಕೆ ಅಳವಡಿಕೆ ಮಾಡಿದ್ದ ವಿದ್ಯುತ್‌ ತಂತಿ ತಗುಲಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬದುಕಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ ಕೂಡ ಟ್ವೀಟ್‌ ಮಾಡಿ ಶ್ಲಾ ಸಿದ್ದರು. ಇದೀಗ ಮೋದಿ ಬಂಡೀಪುರ ಭೇಟಿ ವೇಳೆ ಆನೆ ಉಳಿಸಿದ ಸಿಬ್ಬಂದಿಗೆ ಸ್ಮರಣಿಕೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

Advertisement

ಬಂಡೀಪುರ ಮಾರ್ಗವಾಗಿ ಮಧುಮಲೈಗೆ ಪ್ರಯಾಣ: ಬಂಡೀಪುರ ಮೇಲುಕಾಮನಹಳ್ಳಿ ಸಫಾರಿ ಬಳಿ ಹೆಲಿಕ್ಯಾಪ್ಟರ್‌ನಲ್ಲಿ ಬಂದಿಳಿಯುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಫಾರಿ ವೀಕ್ಷಣೆ ಬಳಿಕ ರಸ್ತೆ ಮಾರ್ಗವಾಗಿ ಮಧುಮಲೈಗೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೆ ಈಗಾಗಲೇ ಅಧಿಕಾರಿಗಳು ಸಿದ್ಧತೆಯನ್ನು ಕೂಡ ನಡೆಸುತ್ತಿದ್ದಾರೆ. ನೀಲಗಿರಿ ಅರಣ್ಯ ಹೊಂದಿಕೊಂಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದ ಗಡಿ ಹೊಂದಿದ್ದು, 1973 ರಲ್ಲಿ ಹುಲಿ ಯೋಜನೆ ಘೋಷಿಸಿದ ವೇಳೆ ಕೇವಲ 10-15 ಹುಲಿಗಳಿದ್ದವು. ಈಗ ಅವುಗಳ ಸಂಖ್ಯೆ 150 ದಾಟಿದೆ ಎನ್ನಲಾಗುತ್ತದೆ. ಈ ಕಾರಣದಿಂದ ಬಂಡೀಪುರಕ್ಕೆ ಮೋದಿ ಭೇಟಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.

ನಕ್ಸಲ್‌ ಚಟುವಟಿಕೆ ಇದ್ದ ಪ್ರದೇಶಕ್ಕೆ ಮೋದಿ ಭೇಟಿ : ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನಕ್ಸಲ್‌ ಚಟುವಟಿಕೆ ಆಗಿಂದ್ದಾಗ್ಗೆ ಕಂಡು ಬರುತ್ತಿದೆ. ಬರಗಿ ಬಳಿ ನಿರ್ಮಾಣ ಮಾಡಿರುವ ಕ್ಯಾಂಪ್‌ನಿಂದ ನಕ್ಸಲ್‌ ನಿಗ್ರಹ ದಳದ ಪೊಲೀಸಲು ನಿರಂತರವಾಗಿ ಕೂಂಬಿಂಗ್‌ ನಡೆಸುತ್ತಲೆ ಇರುತ್ತಾರೆ. ಇದೀಗ ಮೋದಿ ಬಂಡೀಪುರ ಭೇಟಿ ಹಿನ್ನಲೆ ಹೆಚ್ಚುವರಿಯಾಗಿ ಸಿಬ್ಬಂದಿ ನೇಮಕ ಮಾಡಿಕೊಂಡು ಕೂಂಬಿಂಗ್‌ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ಬಂಡೀಪುರ ವ್ಯಾಪ್ತಿಯ ಕೇರಳ ಗಡಿಯ ಮೂಲೆಹೊಳೆ ಚೆಕ್‌ ಪೋಸ್ಟ್‌ ಭಾಗದಲ್ಲಿ ಕಳೆದ ವರ್ಷ ಸ್ಯಾಟಲೈಟ್‌ ಫೋನ್‌ ಬಳಕೆ ಪತ್ತೆಯಾಗಿತ್ತು. ಆ ವೇಳೆ ಪೊಲೀಸರು ಕಾರ್ಯಪ್ರೌರುತ್ತರಾಗಿ ಹೆಚ್ಚಿನ ಕೂಂಬಿಂಗ್‌ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹದುದು.

ಬಂಡೀಪುರ 50 ವರ್ಷ ಪೂರೈಕೆ ಮಾಡಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಕಾರಣದಿಂದ ಇಲಾಖೆಯಿಂದ ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದ್ದು, ಹೆಲಿಪ್ಯಾಡ್‌ ನಿರ್ಮಾಣದ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. -ಡಾ.ರಮೇಶಕುಮಾರ್‌, ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ

ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next