ಯಾನ್‌ಗೋನ್: ಮೊಘಲ್ ಸಂತತಿಯ ಕಡೆಯ ಅರಸ ಬಹದೂರ್ ಶಾ ಝಾಫರ್‌ರ ಸಮಾಧಿ ಸ್ಥಳ ಹಾಗೂ ಸುಮಾರು 2500 ವರ್ಷಗಳ ಇತಿಹಾಸ ಹೊಂದಿರುವ, ಸುಪ್ರಸಿದ್ಧ ಶ್ವೆಡಗಾನ್ ಪಗೋಡಾಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಮ್ಯಾನ್ಮಾರ್ ಪ್ರವಾಸ ಅಂತ್ಯಗೊಳಿಸಿದ್ದಾರೆ.
ಮೂರು ದಿನಗಳ ಪ್ರವಾಸದ ವೇಳೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿರುವ ಪ್ರಧಾನಿ ಮೋದಿ ಹಾಗೂ ಮ್ಯಾನ್ಮಾರ್ ಕೌನ್ಸಿಲರ್ ಆಂಗ್ ಸಾನ್ ಸೂಕಿ, ಸಮುದ್ರ ತೀರದಲ್ಲಿನ ಭದ್ರತೆ, ರಾಜಕೀಯ, ಆರೋಗ್ಯ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿ ಒಟ್ಟು 11 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಮ್ಯಾನ್ಮಾರ್‌ನ ಸುಪ್ರಸಿದ್ಧ ದೇವಾಲಯಗಳು, ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಪ್ರವಾಸದ ಮೂರನೇ ಹಾಗೂ ಕಡೆಯ ದಿನವನ್ನು ಪ್ರಧಾನಿ ಕಳೆದಿದ್ದು ವಿಶೇಷವಾಗಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಯಾನ್‌ಗೊàನ್‌ನ ಕಾಳಿಬರಿ ದೇವಾಲಯಕ್ಕೆ ಭೇಟಿ ನೀಡಿದಾಗ ನೇರ ಗರ್ಭ ಗುಡಿ ಪ್ರವೇಶಿಸುವ ಅವಕಾಶ ಪಡೆದ ಪ್ರಧಾನಿ, ಕಾಳಿಬರಿ ದೇವಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು.
ಸಾಂಸ್ಕೃತಿಕ ತವರಿಗೆ ಭೇಟಿ: ಕಡೆಯ ದಿನದ ಪ್ರಧಾನಿ ಪ್ರವಾಸದಲ್ಲಿ ಮ್ಯಾನ್ಮಾರ್‌ನ ಸಂಸ್ಕೃತಿಯ ಪ್ರತೀಕವಾಗಿರುವ ಪಗೋಡಾ ಭೇಟಿ ಹೆಚ್ಚು ಗಮನಸೆಳೆಯಿತು. ಈ ಭೇಟಿ ಕುರಿತು ಪ್ರತಿಕ್ರಿಯಿಸಿದ ಮೋದಿ, “ಮ್ಯಾನ್ಮಾರ್‌ನ ಸಾಂಸ್ಕೃತಿಕ ತವರು ಭೂಮಿ ಹಾಗೂ ಇಲ್ಲಿನ ಬೌದ್ಧರ ಪ್ರಮುಖ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿರುವುದು ಅತ್ಯಂತ ಸಂಭ್ರಮದ ಕ್ಷಣ. ಶ್ವೆಡಗಾನ್ ಪಗೋಡಾ ಕಂಡು ನಿಬ್ಬೆರಗಾಗಿದ್ದೇನೆ,’ ಎಂದು ಹೇಳಿದ್ದಾರೆ. ನೂರಾರು ಬಂಗಾರದ ಪ್ಲೇಟ್‌ಗಳಿಂದ ಆವೃತ್ತವಾಗಿರುವ ಪಗೋಡಾದ ಸ್ತೂಪದ ತುತ್ತ ತುದಿಯನ್ನು 72 ಕ್ಯಾರಟ್‌ನ ಸುಮಾರು 4,531 ವಜ್ರಗಳಿಂದ ಅಲಂಕರಿಸಲಾಗಿದೆ.
ಮ್ಯಾನ್ಮಾರ್‌ನಿಂದ ಹೊರಡುವ ಮುನ್ನ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಭಾರತ ಮತ್ತು ಮ್ಯಾನ್ಮಾರ್ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸುವ ಉದ್ದೇಶದ ನನ್ನ ಮ್ಯಾನ್ಮಾರ್ ಪ್ರವಾಸ ಯಶಸ್ವಿಯಾಗಿ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉತ್ತಮಗೊಂಡಿದೆ,’ ಎಂದು ಹೇಳಿದ್ದು, ಬಹದೂರ್ ಶಾ ಝಾಫರ್‌ರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ತೆಗೆಸಿಕೊಂಡ ಫೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ.