Advertisement

ಜನರ ದಿಕ್ಕು ತಪ್ಪಿಸುತ್ತಿರುವ ಪ್ರಧಾನಿ ಮೋದಿ: ವಿಶ್ವನಾಥ್‌

08:34 AM Sep 27, 2017 | Team Udayavani |

ಬೆಂಗಳೂರು: “ರಾಜೀವ್‌ಗಾಂಧಿ ಕಾಲದಲ್ಲೇ ಜಾರಿಗೆ ತಂದ ಗ್ರಾಮೀಣ ಕುಡಿಯುವ ನೀರು, ವಿದ್ಯುದ್ದೀಕರಣ ಯೋಜನೆಯನ್ನು ತಿರುಗಾ ಮುರುಗಾ ಮಾಡಿ ನಾನು ಮಾಡಿದ್ದು ಎಂದು ಪ್ರಧಾನಿ ನರೇಂದ್ರಮೋದಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದು’ ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ವಿಶ್ವನಾಥ್‌ ಲೇವಡಿ ಮಾಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜೀವ್‌ ಗಾಂಧಿಯವರು ಜಾರಿಗೊಳಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ವಿದ್ಯುದ್ದೀಕರಣ ಯೋಜನೆ ಪ್ರಾಯೋಗಿಕವಾಗಿ ಮೈಸೂರಿನಲ್ಲಿ ನಾನು ಸಚಿವನಾಗಿದ್ದಾಗ 1992 ರಲ್ಲಿ ಜಾರಿಗೊಳಿಸಿದ್ದೆ. 25 ವರ್ಷಗಳ ನಂತರ ಇವರು ಈಗ ಕಾರ್ಯಕ್ರಮ ನಮ್ಮದು ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಹಾಸ್ಯಾಸ್ಪದ ಯಾವುದೂ ಇಲ್ಲ ಎಂದು ಹೇಳಿದ್ದಾರೆ.
ಐಟಿ-ಬಿಟಿ ಹೊರತುಪಡಿಸಿ ಇಂದಿರಾಗಾಂಧಿಯವರು ಜಾರಿಗೆ ತಂದ 20 ಅಂಶಗಳ ಮುಂದೆ ಯಾವ ಕಾರ್ಯಕ್ರಮವೂ ಇಲ್ಲ. ಆದರೆ, ನರೇಂದ್ರಮೋದಿ ಹೋದೆಡೆಯೆಲ್ಲ ಇದುವರೆಗೂ ಭಾರತದಲ್ಲಿ ಏನೂ ಆಗಿರಲಿಲ್ಲ, ಈಗ ನಾನು ಎಲ್ಲ ಮಾಡುತ್ತಿದ್ದೇನೆಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಹಸಿ ಸುಳ್ಳು ಹೇಳುತ್ತಿದ್ದರೂ ಕನಿಷ್ಠ ಆಕ್ಷೇಪ ವ್ಯಕ್ತಪಡಿಸಲು ಕಾಂಗ್ರೆಸ್‌ ನವರಿಗೆ ಪುರುಸೊತ್ತಿಲ್ಲ. ಅವರಿಗೆ ಏನು ದಾಡಿ ಆಗಿದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರಮೋದಿ ಮನ್‌ ಕಿ ಬಾತ್‌ ಅಂದ್ರೆ ನಮ್ಮದು ವಾಂಗಿ ಬಾತ್‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲಿಶ ಹೇಳಿಕೆ ನೀಡುತ್ತಾ ಕಾಲ ತಳ್ಳುತ್ತಿದ್ದಾರೆ. ರಾಜ್ಯದ ಜನರ ಮೂಲ ಸಮಸ್ಯೆ ನಿವಾರಿಸುವುದರ ಬಗ್ಗೆ ಗಮನಹರಿಸುತ್ತಿಲ್ಲ. ಭಾಗ್ಯಗಳಲ್ಲೇ ತೇಲಿಸುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಮಾಡಿರುವ ಸಾಧನೆಗಳೇನು? ಅವು ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ? ಎಷ್ಟು ಭ್ರಷ್ಟಾಚಾರ ನಡೆದಿದೆ ಎಂಬುದರ ಬಗ್ಗೆ ದಾಖಲೆ ಸಮೇತ ಜನರ ಮುಂದಿಡುವ ಕೆಲಸ ಜೆಡಿಎಸ್‌ ಮಾಡಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next