ಬೆಂಗಳೂರು: ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ನಗರ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ಎಲ್ಲಾ ಕಡೆ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸುಮಾರು 8 ಗೇಟ್ ಗಳ ಮೂಲಕ ಜನರನ್ನು ಒಳಬಿಡುವ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ 3 ಡಿಸಿಪಿ, 33 ಎಸ್ಪಿ, 250 ಸಬ್ ಇನ್ಸ್ ಪೆಕ್ಟರ್, 3 ಸಾವಿರ ಪೊಲೀಸರು, 50 ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಯಾವುದೇ ಪ್ರತಿಭಟನಾಕಾರರನ್ನು ಒಳಬಿಡುವುದಿಲ್ಲ ಎಂದು ಹೇಳಿದರು.
ಪಕೋಡ ಮಾರಾಟಕ್ಕೆ ಅನುಮತಿ ಕೇಳಿಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಸಮೀಪ ಪಕೋಡ ಮಾಡಲು ಅನುಮತಿ ನೀಡಬೇಕೆಂದು ಎನ್ ಎಸ್ ಯುಐ ಪತ್ರ ಬರೆದಿರುವುದಾಗಿ ತಿಳಿಸಿತ್ತು, ಆದರೆ ಪಕೋಡ ಮಾಡಲು ಅನುಮತಿ ಕೋರಿ ಯಾರೂ ಪತ್ರ ಬರೆದಿಲ್ಲ, ಅದಕ್ಕೆ ಅನುಮತಿಯೂ ಕೊಡಲ್ಲ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.