Advertisement

ಉಜ್ವಲ ಭಾರತವೇ ಧ್ಯೇಯ

01:38 AM Jun 10, 2019 | Sriram |

ತಿರುಪತಿ: “ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಫ‌ಲಿತಾಂಶವು ದೇಶದ ಜನರಲ್ಲಿ ವೃದ್ಧಿಸಿರುವ ಇಚ್ಛೆಗಳು ಹಾಗೂ ನಿರೀಕ್ಷೆಗಳನ್ನು ಪ್ರತಿಬಿಂಬಿಸಿದ್ದು, ಇವುಗಳು ಭಾರತವನ್ನು ಇನ್ನಷ್ಟು ಉಜ್ವಲಗೊಳಿಸುವ ಖಾತ್ರಿಯನ್ನು ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಮಾಲ್ಡೀವ್ಸ್‌ ಹಾಗೂ ಶ್ರೀಲಂಕಾ ಪ್ರವಾಸ ಮುಗಿಸಿ ರವಿವಾರ ಸಂಜೆ ಆಂಧ್ರಪ್ರದೇಶದ ತಿರುಪತಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ರೇಣಿಗುಂಟದಲ್ಲಿ ಬಿಜೆಪಿ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ್ದಾರೆ.

ಹೊಸ ದಿಕ್ಕು: “ಚುನಾವಣೆಯ ಭರ್ಜರಿ ಫ‌ಲಿತಾಂಶವನ್ನು ನೋಡಿದ ಕೆಲವರು, ಇದು ಸರಕಾರದ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿರುವುದಕ್ಕೆ ಸಾಕ್ಷಿ. ಈಗ ಮೋದಿ ಏನು ಮಾಡುತ್ತಾರೆ ಎಂದು ಕೇಳತೊಡಗಿದ್ದಾರೆ. ಆದರೆ, ನಾನು ಇದನ್ನು ಒಂದು ಉತ್ತಮ ಅವಕಾಶವೆಂದು ಭಾವಿಸುತ್ತೇನೆ. ಉಜ್ವಲ ಭಾರತದ ಖಾತ್ರಿ ಎಂದು ಭಾವಿಸುತ್ತೇನೆ. ಜನತೆಯ ಬೆಂಬಲ ಹಾಗೂ ಕೊಡುಗೆಯನ್ನು ನೋಡಿದ ಮೇಲೆ, ದೇಶಕ್ಕೆ ಹೊಸ ದಿಕ್ಕನ್ನು ನಾವು ಕಲ್ಪಿಸುತ್ತೇವೆ ಎಂಬ ವಿಶ್ವಾಸ ನನಗೆ ಮೂಡಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“130 ಕೋಟಿ ಭಾರತೀಯರಲ್ಲಿ ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದೆ ಇಟ್ಟರೆ, ಅಷ್ಟು ಹೆಜ್ಜೆಗಳಷ್ಟು ಮುಂದಕ್ಕೆ ದೇಶವು ಸಾಗುತ್ತದೆ. ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ನಾವು ಈ ಗುರಿಯನ್ನು ಸಾಧಿಸಬಲ್ಲೆವು ಹಾಗೂ ನವ ಭಾರತವನ್ನು ನಿರ್ಮಿಸಬಲ್ಲೆವು’ ಎಂದಿದ್ದಾರೆ ಮೋದಿ.

ರಾಹುಲ್‌ ವಿರುದ್ಧ ವಾಗ್ಧಾಳಿ: ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಮೋದಿ, “ಕೆಲವರು ಇನ್ನು ಕೂಡ ಚುನಾವಣೆಯ ಹ್ಯಾಂಗ್‌ ಓವರ್‌ನಿಂದ ಹೊರಬಂದಿಲ್ಲ. ಆದರೆ, ನಮಗೆ ಚುನಾವಣೆ ಮುಗಿಯಿತು. ಈಗೇನಿದ್ದರೂ ಸಂಪೂರ್ಣವಾಗಿ ನಾವು ಜನರ ಅಭಿವೃದ್ಧಿ ಮತ್ತು ಕಲ್ಯಾಣದತ್ತ ಗಮನ ಕೇಂದ್ರೀಕರಿಸಿದ್ದೇವೆ’ ಎಂದಿದ್ದಾರೆ.

Advertisement

ಜಗನ್‌ಗೆ ಅಭಯ: ಕೇಂದ್ರದಲ್ಲಿ ಹಾಗೂ ಆಂಧ್ರದಲ್ಲಿ ಬಲಿಷ್ಠ ಸರಕಾರಗಳು ರೂಪುಗೊಂಡಿವೆ. ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ನಾನು ಹಾರೈಸುತ್ತೇನೆ. ಆಂಧ್ರದಲ್ಲಿ ಪ್ರಗತಿಗೆ ಅಪರಿಮಿತ ಅವಕಾಶಗಳಿವೆ. ರಾಜ್ಯದ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದೂ ಮೋದಿ ಅಭಯ ನೀಡಿದ್ದಾರೆ.

ತಿಮ್ಮಪ್ಪನ ದರ್ಶನ ಪಡೆದ ಮೋದಿ
ರವಿವಾರ ಆಂಧ್ರಪ್ರದೇಶದಲ್ಲಿ ವಿಜಯೋತ್ಸವ ಸಭೆ ನಡೆಸಿದ ಬಳಿಕ ತಿರುಮಲದ ವೆಂಕಟೇಶ್ವರ ದೇಗುಲಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಅವರಿಗೆ ಇಲ್ಲಿನ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ ಆಂಧ್ರಪ್ರದೇಶದ ರಾಜ್ಯಪಾಲರಾದ ಇಎಸ್‌ಎಲ್‌ ನರಸಿಂಹನ್‌, ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ ಕೂಡ ಮೋದಿ ಜತೆಗಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮೋದಿ ಅವರು ಸುಮಾರು 30ರಿಂದ 45 ನಿಮಿಷಗಳ ಕಾಲ ಬಾಲಾಜಿ ಮಂದಿರದಲ್ಲಿದ್ದು, ಪೂಜೆ ಸಲ್ಲಿಸಿದರು.

ನಾಯ್ಡುಗೆ ಟಾಂಗ್‌
ತಮ್ಮ ಭಾಷಣದಲ್ಲಿ ಮೋದಿ ಆಂಧ್ರದ ಮಾಜಿ ಸಿಎಂ, ಟಿಡಿಪಿ ನಾಯಕ ಚಂದ್ರ ಬಾಬು ನಾಯ್ಡು ಅವರ ಹೆಸರೆತ್ತದೆ ಅವರಿಗೆ ಟಾಂಗ್‌ ನೀಡಿದ್ದು ಕಂಡು ಬಂತು. ಕೆಲವರು ಚುನಾವಣೆಯಲ್ಲಿ ಸೋಲುಂಡ ಬಳಿಕ ಜನರ ಮುಂದೆ ಬರುವುದೇ ಇಲ್ಲ. ಆದರೆ, ನಾವು ಹಾಗಲ್ಲ. ಬಿಜೆಪಿಯು ಯಾವತ್ತೂ ಜನರ ಜತೆಗಿರುತ್ತದೆ ಎಂದು ಹೇಳುವ ಮೂಲಕ ನಾಯ್ಡುಗೆ ತಿವಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next