ಬೆಂಗಳೂರು: ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಗ್ರೀಸ್ ನಿಂದ ನೇರವಾಗಿ ಬೆಂಗಳೂರಿಗೆ ಬಂದು ವಿಜ್ಞಾನಿಗಳನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23 ನ್ನು ‘ಬಾಹ್ಯಾಕಾಶ ದಿನ’ವಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರ ಮುಂಜಾನೆ 6.30 ಕ್ಕೆ ಗ್ರೀಸ್ ನಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ನೇರವಾಗಿ ಇಸ್ರೋ ಕೇಂದ್ರಕ್ಕೆ ಬಂದು ವಿಜ್ಞಾನಿಗಳನ್ನು ಅಭಿನಂದಿಸಿದರು.
ಪ್ರಧಾನಿ ಮೋದಿ ಅವರನ್ನು ಎದುರುಗೊಂಡು ಗುಂಪು ಚಿತ್ರ ತೆಗೆಸಿಕೊಂಡ ಇಸ್ರೋ ವಿಜ್ಞಾನಿಗಳು. ಬಳಿಕ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಚಂದ್ರಯಾನ-3, ಲ್ಯಾಂಡರ್ ವಿಕ್ರಮ್, ರೋವರ್ ಪ್ರಗ್ಯಾನ್ ಮಾದರಿ ಪ್ರಾತ್ಯಕ್ಷಿಕೆ ತೋರಿಸಿ ಅವುಗಳ ಕಾರ್ಯಾಚರಣೆ, ಕಾರ್ಯ ನಿರ್ವಹಣೆ ಬಗ್ಗೆ ಖುದ್ದು ಪ್ರಧಾನಿಗೆ ವಿವರಿಸಿದರು.
ಬಳಿಕ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇದೊಂದು ಖುಷಿಯ ದಿನ. ತನು, ಮನ ಖುಷಿಯಿಂದ ಇದೆ. ವ್ಯಕ್ತಿಯ ಜೀವನದಲ್ಲಿ ಎಷ್ಟು ಬಾರಿ ಇಂತಹ ಘಟನೆಗಳು ನಡೆಯುತ್ತವೆ. ಗ್ರೀಸ್ ನಲ್ಲಿದ್ದೆ. ಮನಸ್ಸು ಇಲ್ಲೇ ಇತ್ತು. ನಿಮ್ಮಗಳ ಕಡೆಗೇ ನನ್ನ ಲಕ್ಷ್ಯವಿತ್ತು. ನಿಮ್ಮೆಲ್ಲರ ದರ್ಶನ ಪಡೆಯಬೇಕೆಂದು ಮನಸ್ಸು ಹಂಬಲಿಸಿತ್ತು. ಎಲ್ಲರಿಗೂ ನನ್ನ ಸೆಲ್ಯೂಟ್. ಗದ್ಗದಿತರಾದ ಮೋದಿ. ನಿಮ್ಮ ಪರಿಶ್ರಮ, ಧೈರ್ಯ, ಲಗನ್, ಜೀವಿತಾಕ್ಕೆ ಸೆಲ್ಯೂಟ್ ಎಂದರು.
ದೇಶವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಇದು ಅನಂತ ಅಂತರಿಕ್ಷದ ಶಂಖನಾದ. ‘ಇಂಡಿಯಾ ಈಸ್ ಆನ್ ದ ಮೂನ್’, ವಿ ಹ್ಯಾವ್ ಅವರ್ ನ್ಯಾಷನಲ್ ಪ್ರೈಡ್ ಆನ್ ದ ಮೂನ್’. ನೀವೇನು ಸಾಧಿಸಿದ್ದೀರಿ ಇದನ್ನು ಯಾರೂ ಮೊದಲು ಮಾಡಿಲ್ಲ. ಹೊಸ ರೀತಿಯಲ್ಲಿ ಚಿಂತನೆ ಮಾಡುವ ಭಾರತವಿದು. ಜಗತ್ತಿಗೆ ಸೂರ್ಯರಶ್ಮಿಯಂತೆ ಕಂಗೊಳಿಸುತ್ತಿದೆ. ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಸಮಾಧಾನ ನೀಡುವ ದೇಶವಿದು ಎಂದು ಹೇಳಿದರು.
ನಿಮ್ಮನ್ನು ಎಷ್ಟು ಹೊಗಳಿದರೂ ಕಡಿಮೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲವನ್ನೂ ಸೇರಿಸಿದೆ. ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ‘ಶಿವಶಕ್ತಿ’ ಎಂದು ಹೆಸರಿಸಿದ ಪ್ರಧಾನಿ ಮೋದಿ. ಶಿವಶಕ್ತಿ ನಮಗೆ ಪ್ರೇರಣೆ ಎಂದು ಹೇಳಿದರು.
‘ಪ್ರಜಾನಾಂ ತನ್ಮೇ ಮನಃ ಶಿವಸಂಕಲ್ಪಮಸ್ತು’ ಎನ್ನುವಂತೆ ಶಿವನಲ್ಲಿ ಮಾನವನ ಅಭಿವೃದ್ಧಿ ಇದೆ. ಶಕ್ತಿಯ ಸಾಮರ್ಥ್ಯವೂ ಇದೆ. ಇದು ನಮ್ಮ ಪ್ರಮುಖ ಬದ್ಧತೆಯೂ ಹೌದು. ಸೃಷ್ಟಿ ಸ್ಥಿತಿ ವಿನಾಶನಾಂ ಶಕ್ತಿ ಭೂತೆ ಸನಾತನಿ’ ಎಂಬಂತೆ ಚಂದ್ರಯಾನದಲ್ಲಿ ದೇಶದ ನಾರಿ ಶಕ್ತಿ ಹೆಚ್ಚಾಗಿದೆ.
ಮನೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೆವು. ಚಂದ್ರನ ಮೇಲೂ ದೇಶದ ಬಾವುಟ ಹಾರಿಸಿದ್ದೇವೆ. ಚಂದ್ರಯಾನ-2 ಇಳಿದ ಜಾಗಕ್ಕೆ ‘ತಿರಂಗಾ’ ಎಂದು ಹೆಸರಿಸಿದ ಮೋದಿ. ಮೇಕ್ ಇನ್ ಇಂಡಿಯಾದಿಂದ ಚಂದ್ರನವರೆಗೆ ಸಾಗಿದ್ದೇವೆ ಎಂದು ಹೇಳಿದರು.
ಚಂದ್ರಯಾನ-3 ಯಶಸ್ವಿಯಾದ ಆಗಸ್ಟ್ 23 ಇನ್ನು ಮುಂದೆ ‘ಬಾಹ್ಯಾಕಾಶ ದಿನ’ವಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Bengaluru: ‘ಜೈ ವಿಜ್ಞಾನ್, ಜೈ ಅನುಸಂಧಾನ’.. ಬೆಂಗಳೂರಿಗೆ ಬರುತಿದ್ದಂತೆ ಪ್ರಧಾನಿ ಘೋಷಣೆ