Advertisement

ಶಕ್ತಿವಂತ ಚೌಕಿದಾರ ಬೇಕೋ ಕಲಬೆರಕೆ ಸರಕಾರ ಬೇಕೋ ನೀವೇ ನಿರ್ಧರಿಸಿ

09:07 AM Mar 29, 2019 | Hari Prasad |

ಮೀರತ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಜಾಥಾಗೆ ಉತ್ತರಪ್ರದೇಶದ ಮೀರತ್‌ ನಿಂದ ಭರ್ಜರಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ವಿರೋಧ ಪಕ್ಷದ ನಾಯಕರ ಮೇಲೆ ಮತ್ತು ಮುಖ್ಯವಾಗಿ ಕಾಂಗ್ರೆಸ್‌ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರಸ್‌ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಅವರ ಜಾತಿಯನ್ನು ವಿಚಾರಿಸಿ ಆ ಮೇಲೇ ವಿಚಾರಣೆ ನಡೆಸುತ್ತಿತ್ತು ಎಂದು ಕಾಂಗ್ರೆಸ್‌ ಪಕ್ಷದ ಮೃದು ಉಗ್ರ ನೀತಿಯ ವಿರುದ್ಧ ಗಂಭೀರವಾದ ಆರೋಪವನ್ನು ಮೋದಿ ಇದೇ ಸಂದರ್ಭದಲ್ಲಿ ಮಾಡಿದರು.

Advertisement

ನಿಮಗೆ ದಾಮ್‌ ದಾರ್‌ ಚೌಕಿದಾರ್‌ (ಶಕ್ತಿಶಾಲಿ ಚೌಕಿದಾರ) ಬೇಕೋ ಅಥವಾ ಕಲಬೆರಕೆ ಸರಕಾರ ಬೇಕೇ ಎಂಬುದನ್ನು ನೀವೇ ನಿರ್ಧರಿಸಿ ಎಂದು ಅವರು ಜನರನ್ನು ಉದ್ದೇಶಿಸಿ ನುಡಿದರು. ಭೂಮಿಯಿಂದಾಗಲಿ, ಆಕಾಶದಿಂದಾಗಲಿ ಅಥವಾ ಬಹ್ಯಾಕಾಶದಲ್ಲಾಗಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಛಾತಿಯನ್ನು ನನ್ನ ಸರಕಾರವು ತೋರ್ಪಡಿಸಿದೆ ಎಂದು ಮೋದಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

‘ಐದು ವರ್ಷಗಳ ಹಿಂದೆ ನಾನು ನಿಮ್ಮ ಆಶೀರ್ವಾದದಿಂದ ಈ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಸಂದರ್ಭದಲ್ಲಿ ನೀವು ಅಪರಿಮಿತ ಪ್ರೀತಿಯನ್ನು ನನಗೆ ತೋರಿಸಿದ್ದೀರಿ. ಈ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಬಡ್ಡಿ ಸಹಿತ ತೀರಿಸುತ್ತೇನೆಂದು ನಾನಂದು ನಿಮಗೆ ಭರವಸೆ ಕೊಟ್ಟಿದ್ದೆ ಮಾತ್ರವಲ್ಲದೇ ಈ ಐದು ವರ್ಷಗಳಲ್ಲಿ ನನ್ನ ಸರಕಾರ ಮಾಡಿದ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ನಿಮ್ಮ ಮುಂದಿದೆ. ಈ ನಿಮ್ಮ ಚೌಕಿದಾರ ನಿಮ್ಮ ನಂಬಿಕೆಗೆ ಅಪಚಾರ ಮಾಡಿಲ್ಲ, ಈಗ ಯಾರಿಗೆ ಮತ ಹಾಕಬೇಕು ಎಂದು ಭಾರತ ನಿರ್ಧರಿಸುವ ಸಮಯ ಬಂದಿದೆ’ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

‘ರಾಷ್ಟ್ರೀಯ ಹಿತಾಸಕ್ತಿಯನ್ನ ಸಂರಕ್ಷಿಸುವ ನಮ್ಮ ಕೆಲಸವನ್ನು ಅವರು ಪ್ರಶ್ನಿಸಿದರು. ಎಲ್‌.ಒ.ಸಿ.ಯಲ್ಲಿರುವ ಉಗ್ರ ಶಿಬಿರಗಳನ್ನು ನಾಶಪಡಿಸಿದಾಗಲೂ ಅವರು ನಮ್ಮನ್ನು ಪ್ರಶ್ನಿಸಿದರು. ಅವರೆಲ್ಲಾ ಪಾಕಿಸ್ಥಾನದ ಕಣ್ಣಿನಲ್ಲಿ ‘ಹೀರೋ’ಗಳಾಗಲು ಸ್ಪರ್ಧೆಗೆ ಬಿದ್ದಿದ್ದಾರೆ. ಈಗ ನಮಗೆ ಭಾರತದ ಹೀರೋಗಳು ಬೇಕೇ ಅಥವಾ ಪಾಕಿಸ್ಥಾನದ ಹೀರೋಗಳು ಬೇಕೇ ಎಂಬುದನ್ನು ಈ ದೇಶದ ಮತದಾರರೇ ನಿರ್ಧರಿಸಲಿ’ ಎಂದು ಮೋದಿ ಅವರು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳನ್ನು ಗುರಿಯಾಗಿಸಿ ತಮ್ಮ ಮಾತಿನ ಛಾಟಿಯನ್ನು ಬೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next