Advertisement

ಪ್ರಧಾನಿ ಮೋದಿ ಸ್ವಾಗತಕ್ಕೆ ಮಾತಾಡುವ ಗಿಡಗಳು ಸಜ್ಜು

06:00 AM Dec 05, 2018 | |

ಹುಬ್ಬಳ್ಳಿ: “ಗಿಡಗಳು ಮಾತನಾಡುತ್ತವೆ, ತಮ್ಮ ನೋವು ಹೇಳಿಕೊಳ್ಳುತ್ತವೆ, ಒಂದು ಗಿಡ ಮಾತನಾಡಲು ಆರಂಭಿಸಿದರೆ, ಇನ್ನೊಂದು ಗಿಡ ಮನುಷ್ಯರು ಗೋಣು ಹಾಕುವ ರೂಪದಲ್ಲಿ ಅಲುಗಾಡಿ ಮಾತುಗಳನ್ನು ಆಲಿಸುತ್ತದೆ..’ ಮಾಸಾಂತ್ಯಕ್ಕೆ ವಿಜಯಪುರಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ ಕೋರಲು ಗಿಡಗಳು ಸಜ್ಜಾಗುತ್ತಿವೆ. ಕೃಷಿಯಲ್ಲಿ ತಂತ್ರಜ್ಞಾನವನ್ನು 
ಪರಿಣಾಮಕಾರಿಯಾಗಿ ಅಳವಡಿಕೆ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂಬ ನಿಟ್ಟಿನಲ್ಲಿ ತಮ್ಮದೇ ಪ್ರಯೋಗ ಕೈಗೊಂಡಿರುವ ವಿಜಯಪುರದ ಕೃಷಿ ತರಂಗ ಸಂಸ್ಥೆಯ ಗಿರೀಶ ಬದ್ರಗೊಂಡ ಅವರು, ಮಾತನಾಡುವ ಗಿಡಗಳನ್ನು ಸೃಷ್ಟಿಸಿದ್ದಾರೆ. ಸಸ್ಯ, ಗಿಡ-ಮರಗಳಿಗೂ ಜೀವವಿದೆ ಎಂಬ ವಿಜ್ಞಾನಿಗಳ ಸೂತ್ರವನ್ನೇ ಬಳಸಿಕೊಂಡು ಪ್ರಾಯೋಗಿಕವಾಗಿ ಎರಡು ಗಿಡಗಳನ್ನು ಮಾತನಾಡುವ ಗಿಡಗಳಾಗಿ ಪರಿವರ್ತಿಸಿದ್ದಾರೆ.

Advertisement

ಹೇಗೆ ಮಾತಾಡುತ್ತವೆ?: ಎರಡು ಗಿಡಗಳಿಗೆ ಆಡಿಯೋ ಎಂಪ್ಲಿಪೈಯರ್‌, ವೈಬ್ರೇಟರ್‌ ಹಾಗೂ ಧ್ವನಿವರ್ಧಕ ಅಳವಡಿಸಲಾಗುತ್ತದೆ. ಸೋಲಾರ್‌ ಪೆನಲ್‌ ಆಧಾರಿತವಾಗಿ ಇದು ಕಾರ್ಯ ನಿರ್ವಹಿಸಲಿದ್ದು, ಸ್ವಯಂ ನಿರ್ವಹಣೆ ಕೈಗೊಳ್ಳಲಿದೆ. ಗಿಡಗಳ ಮಾತುಗಳನ್ನು ಕೇವಲ ರಂಜನೆಗೆ ಸೀಮಿತವಾಗಿಲ್ಲ. ಬದಲು ಪರಿಸರ ಪ್ರಜ್ಞೆ, ಗಿಡ-ಮರಗಳ ಸಂರಕ್ಷಣೆ, ಆರೋಗ್ಯ, ನೈರ್ಮಲ್ಯ, ನಗರ ಸ್ವತ್ಛತೆ, ಮನುಷ್ಯರಿಂದ ತಮಗಾಗುವ ನೋವು, ತಮ್ಮ ಜೀವವನ್ನೇ ತೆಗೆಯುವ ಧಾರುಣ ಕೃತ್ಯಗಳ ಬಗ್ಗೆ ಗಿಡಗಳು ಮಾತನಾಡುತ್ತವೆ. 
ಮೊದಲು ಅಳವಡಿಸಿದ ಧ್ವನಿಮುದ್ರಿತ ಸಂದೇಶವನ್ನು ಆಡಿಯೋ ಎಂಪ್ಲಿಪೈಯರ್‌, ವೈಬ್ರೇಟರ್‌ ಇನ್ನಿತರ ಸಲಕರಣೆಗಳ ಸಹಕಾರದೊಂದಿಗೆ ಅಕ್ಕಪಕ್ಕದ ಗಿಡಗಳಿಗೆ ಅಳವಡಿಸಲಾಗುತ್ತದೆ. ಮಾತನಾಡುವ ಗಿಡಗಳ ಪ್ರಾಯೋಗಿಕ ಯತ್ನ ಯಶಸ್ವಿಯಾದಲ್ಲಿ ಸ್ಥಳೀಯ ಸರ್ಕಾರ ಇಲ್ಲವೇ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ, ಸ್ವಚ್ಛತೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ನಗರದ ಜನ ಸೇರುವ ಕಡೆಗಳಲ್ಲಿನ ಗಿಡಗಳಿಗೆ ಅಳವಡಿಸುವ ಚಿಂತನೆ ಹೊಂದಲಾಗಿದೆ.

ಪರಿಸರ ಪಾಠ ಮಾಡುತ್ತವೆ: ಗಿಡಗಳ ಮೂಲ ಅಸ್ತಿತ್ವ, ಪಕ್ಷಿ-ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ಈ ವ್ಯವಸ್ಥೆ ರೂಪಿಸಲಾಗಿದೆ. ಗಿಡಗಳು ಮಾತು ಆರಂಭಿಸಿದರೆ ವೈಬ್ರೆಟರ್‌ ಮೂಲಕ ಗಿಡದ ಒಂದೆರಡು ರೆಂಬೆಗಳು ಅಲುಗಾಡಲು ಆರಂಭಿಸುತ್ತವೆ. ಸಾಧಾರಣ ಗಾಳಿ ಬಿಟ್ಟಾಗ ರೆಂಬೆಗಳು ಯಾವ ರೀತಿ ನಿಧಾನ ರೀತಿಯಲ್ಲಿ ಅಲುಗಾಡುತ್ತವೆಯೋ ಅದೇ ಮಾದರಿಯಲ್ಲಿ ವೈಬ್ರೇಟರ್‌ ಅಳವಡಿಸಲಾಗಿದ್ದು, ಅದೇ ಮಾದರಿಯಲ್ಲಿ ಮಾತು ಕೇಳಿಸಿಕೊಳ್ಳುವ ಗಿಡದ ರೆಂಬೆಗಳು ಅಲು ಗಾಡಲು
ಆರಂಭಿಸುತ್ತವೆ. ನೋಡುಗರಿಗೆ ಮಾತು ಕೇಳುವ ಗಿಡ ತಲೆಯಾಡಿಸುತ್ತಿದೆ ಎಂಬಂತೆ ಭಾಸವಾಗುತ್ತದೆ. ಜನ ಸೇರುವ ಕಡೆ ಗಿಡಗಳ ಕೆಳಗೆ ಜನ ಹೋಗಿ ನಿಂತರೆ ಸಾಕು ಸ್ವಯಂ ಚಾಲನೆ ಪಡೆದುಕೊಂಡು ಗಿಡಗಳು ಮಾತನಾಡಲು ಆರಂಭಿಸುತ್ತವೆ. ಅಭಿವೃದ್ಧಿ
ನೆಪದಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ನೋವು ತೋಡಿಕೊಳ್ಳುತ್ತವೆ, ಪರಿಸರ ಕಾಳಜಿ ತೋರದಿದ್ದರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸುತ್ತವೆ. ಪರಿಸರ ಸ್ನೇಹಿ ಕೃಷಿಗೆ ಪ್ರೇರೆಪಿಸುತ್ತವೆ. ಪರಿಸರ ಮಾಲಿನ್ಯ ತಡೆಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಮನವಿ ಮಾಡುತ್ತವೆ. ತ್ಯಾಜ್ಯ ವಿಲೇವಾರಿ, ಆರೋಗ್ಯ, ನೈರ್ಮಲ್ಯದ ಬಗ್ಗೆ ಮಾಹಿತಿ ನೀಡುತ್ತವೆ. ಎಲ್ಲವನ್ನು 
ಕೇಳಿದ ಮೇಲೆ ಧನ್ಯವಾದ ಅರ್ಪಿಸುತ್ತವೆ.

24ರಿಂದ 31ರವರೆಗೆ ಕಾರ್ಯಕ್ರಮ
ಭಾರತ ವಿಕಾಸ ಸಂಗಮ ತನ್ನ ಐದನೇ ಭಾರತೀಯ ಸಂಸ್ಕೃತಿ ಉತ್ಸವವನ್ನು ಡಿ.24ರಿಂದ 31ರವರೆಗೆ ವಿಜಯಪುರದಲ್ಲಿ ಹಮ್ಮಿಕೊಂಡಿದೆ. ಸಮಾವೇಶದ ಸಮಾರೋಪಕ್ಕೆ ಇಲ್ಲವೇ ಸಮಾವೇಶದ ಒಂದು ದಿನ ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದು ಬಹುತೇಕ ಖಚಿತವಾಗಿದೆ. ಸಮಾವೇಶದ ಅಂಗವಾಗಿ ಕೈಗೊಂಡಿರುವ ಲಕಪತಿಶೇತಿ (ಲಕ್ಷಾಧೀಶ ರೈತ) ಕೃಷಿ ಹಾಗೂ ವಿವಿಧ ತಂತ್ರಜ್ಞಾನ ಬಳಸಿ ರೂಪಿಸಿದ ಕೃಷಿ ಪ್ರಯೋಗವನ್ನು ಮೋದಿ ವೀಕ್ಷಿಸಲಿದ್ದಾರೆ. ಆ ಸಂದರ್ಭದಲ್ಲಿ ಇಲ್ಲವೇ ವೇದಿಕೆಯಲ್ಲಿಯೇ ಎರಡು ಗಿಡಗಳ ಮಾತುಗಳ ಮೂಲಕ ಪ್ರಧಾನಿಯವರಿಗೆ ಸ್ವಾಗತ ಕೋರಲು, ತಮ್ಮ ಒಂದೆರಡು ಅನಿಸಿಕೆಗಳನ್ನು ವ್ಯಕ್ತಪಡಿಸಲು ಗಿಡಗಳನ್ನು ಸಜ್ಜುಗೊಳಿಸಲಾಗಿದೆ.

ಗಿಡಗಳಿಗೂ ಜೀವವಿದೆ. ಅವು ಕಣ್ಣೀರಿಡುತ್ತವೆ ಎಂಬ ಸೂತ್ರದಡಿ ತಂತ್ರ ಜ್ಞಾನ ಬಳಸಿ ಗಿಡಗಳನ್ನು ಮಾತನಾಡಿಸುವ ಮೂಲಕ ಜನರಲ್ಲಿ ಪರಿಸರ-ಸ್ವತ್ಛತೆ ಪ್ರಜ್ಞೆ ಮೂಡಿಸುವ ಯತ್ನಕ್ಕೆ ಮುಂದಾಗಿದ್ದೇನೆ. ವೈಬ್ರೇಟರ್‌ ಮೇಲೆ ಕವರ್‌ ಹಾಕುತ್ತಿದ್ದು, ಮಳೆ ಬಂದರೂ ಸಿಸ್ಟಮ್‌ ಹಾಳಾಗುವುದಿಲ್ಲ. ಪ್ರಾಯೋಗಿಕವಾಗಿ ಕೈಗೊಂಡಿರುವ ಈ ವ್ಯವಸ್ಥೆಗೆ 8 ಸಾವಿರ ವೆಚ್ಚವಾಗಿದೆ. 
● ಗಿರೀಶ ಬದ್ರಗೊಂಡ, ಕೃಷಿ ತರಂಗ, ವಿಜಯಪುರ

Advertisement

● ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next