ಬೆಂಗಳೂರು: ಕರ್ನಾಟಕದ 3 ಜಿಲ್ಲೆಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಗರದ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಚುನಾವಣೆ ಬರುವವರೆಗೆ ಕನ್ನಡಿಗರು ಕಾಯಲು ಸಿದ್ದರಿಲ್ಲ. ದೇಶದ ಇತರ ರಾಜ್ಯಗಳಂತೆ ಕರ್ನಾಟಕವೂ ವಿಕಾಸದೊಂದಿಗೆ ಮುನ್ನುಗ್ಗಲು ಬಯಸುತ್ತಿದೆ. ಮುಂದಿನ ಚುನಾವಣೆಯಲ್ಲಿ ವಿಕಾಸ ಯಾತ್ರೆಯೊಂದಿಗೆ ಸಾಗಲು ಸಿದ್ಧವಾಗಿದ್ದಾರೆ.ದೇಶದ ಜನರಿಗೆ ಕಾಂಗ್ರೆಸ್ ನಿಂದ ಯಾವುದೇ ನಿರೀಕ್ಷೆ ಇಲ್ಲವಾಗಿದೆ’ ಎಂದರು.
‘ದೇಶದ ಸುರಕ್ಷೆ ,ಆಂತರಿಕ ಸುರಕ್ಷೆ ಜನರ ಮುಖ್ಯ ಗುರಿಯಾಗಬೇಕು. ಸರ್ದಾರ್ ವಲ್ಲಭಭಾಯಿ ಪಟೇಲ್ ಇದಕ್ಕೆ ಬದ್ಧರಾಗಿದ್ದರು. ಕಾಶ್ಮೀರದಲ್ಲಿ ಸಾವಿರಾರು ಸೈನಿಕಲು ಹುತಾತ್ಮರಾಗಿದ್ದಾರೆ. ಪ್ರತೀಯೊಬ್ಬರು ಮಾತೃಭೂಮಿಯ ರಕ್ಷಣೆಗೆ ಬಲಿದಾನ ನೀಡಿದ್ದಾರೆ. ಇಂದು ಕಾಂಗ್ರೆಸ್‌ನವರು ಯೂಟರ್ನ್ ಹೊಡೆದು ದೇಶದ ಯೋಧರ ಬಲಿದಾನದ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಬಲಿದಾನ ನೀಡಿದವರಿಗೆ ಉತ್ತರ ನೀಡಬೇಕು, ಹುತಾತ್ಮರ ಪತ್ನಿಯರಿಗೆ , ಮಕ್ಕಳಿಗೆ , ತಾಯಂದಿಯರಿಗೆ ಉತ್ತರ ನೀಡಬೇಕಾಗಿದೆ’ಎಂದು ಕಿಡಿ ಕಾರಿದರು.
‘ಕಾಶ್ಮೀರದ ವಿಚಾರದಲ್ಲಿ ಪಾಕಿಸ್ಥಾನದಲ್ಲಿ ಆಡುವ ಮಾತು, ಪ್ರತ್ಯೇಕತಾವಾದಿಗಳು ಆಡುವ ಮಾತು ನಮ್ಮಲ್ಲಿ ಕೇಳಿ ಬರುತ್ತಿದೆ.ಸರ್ಜಿಕಲ್ ದಾಳಿಯಲ್ಲಿ ನಮ್ಮ ಯಶಸ್ಸನ್ನೂ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ನಾನು ಭವಿಷ್ಯದ ಅಧ್ಯಕ್ಷರನ್ನು ಉದ್ದೇಶಿಸಿ ಕೇಳುತ್ತೇನೆ ಯಾಕೆ ನೀವು ಸರ್ಜಿಕಲ್ ದಾಳಿಯ ಕುರಿತು ನಿರಾಸೆಯಿಂದ ಮಾತನಾಡಿದ್ದು ಏಕೆ’ಎಂದು ಪ್ರಶ್ನಿಸಿದರು.
‘ನಾವು ದೇಶದ ಏಕತೆ ಮತ್ತು ಅಖಂಡತೆಗೆ ಭಂಗವಾಗುವಂತೆ ಎಂದಿಗೂ ನಡೆದುಕೊಳ್ಳುವುದಿಲ್ಲ’ ಎಂದರು.
ಸ್ವಾಗತಕ್ಕೆ ತೆರಳಿದ್ದ ಸಿಎಂ
ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಪೇಟ ತೊಡಿಸಿ , ಹಾರ ಹಾಕಿ ಸ್ವಾಗತಿಸಿದರು. ಈ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು.