Advertisement

ಉಗ್ರತ್ವಕ್ಕೆ ಕುಮ್ಮಕ್ಕು ಕೊಡುತ್ತಿದ್ದ 370

09:57 AM Nov 01, 2019 | Hari Prasad |

ಕೇವಡಿಯಾ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದಿಂದ ಭಯೋತ್ಪಾದನೆಗೆ ಕುಮ್ಮಕ್ಕು ಸಿಗುತ್ತಿತ್ತು. ಅದನ್ನು ರದ್ದು ಮಾಡಲು ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರೇ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಪಟೇಲ್‌ರ 144ನೇ ಜನ್ಮದಿನ ಪ್ರಯುಕ್ತ ಗುಜರಾತ್‌ನ ಕೇವಡಿಯಾದಲ್ಲಿನ ‘ಏಕತಾ ಪ್ರತಿಮೆ’ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಟೇಲ್‌ಗೆ ಗೌರವ ಅರ್ಪಿಸಿದ ಬಳಿಕ ಪ್ರಧಾನಿ ಮಾತನಾಡಿದರು.

Advertisement

‘ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಸಂವಿಧಾನದ 370ನೇ ವಿಧಿಯ ಅನ್ವಯದ ಸ್ಥಾನಮಾನ ಹಿಂಪಡೆದು, ಲಡಾಖ್‌ ಮತ್ತು ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ಸೃಷ್ಟಿಸುವುದು ಸರಕಾರದ ಉದ್ದೇಶವಲ್ಲ. ಬಲವಾಗಿರುವ ನಂಬಿಕೆಯ ಬುನಾದಿ ಸೃಜಿಸುವುದೇ ಕೇಂದ್ರದ ಉದ್ದೇಶ. ವಿಶೇಷ ಸ್ಥಾನಮಾನದಿಂದ ಉಗ್ರಗಾಮಿ ತ್ವಕ್ಕೆ ಮತ್ತು ಪ್ರತ್ಯೇಕತಾವಾದಕ್ಕೆ ಹೆಚ್ಚಿನ ಕುಮ್ಮಕ್ಕು ಸಿಗುತ್ತಿತ್ತು. ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆಯಿಂದಾಗಿ ಮೂರು ದಶಕಗಳಲ್ಲಿ 40 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಅದನ್ನು ರದ್ದು ಮಾಡುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಮೋದಿ ಹೇಳಿದ್ದಾರೆ.

ಪಟೇಲರೇ ಸ್ಫೂರ್ತಿ: ಸರಕಾರ ಇಂಥ ನಿರ್ಧಾರ ಕೈಗೊಳ್ಳಲು ಸರ್ದಾರ್‌ ಪಟೇಲ್‌ರೇ ಸ್ಫೂರ್ತಿ ಎಂದ ಪ್ರಧಾನಿ, ತಮ್ಮ ನೇತೃತ್ವದ ಸರಕಾರ ದೇಶದ ಭಾವನಾತ್ಮಕ, ಆರ್ಥಿಕ ಮತ್ತು ಸಾಂವಿ ಧಾನಿಕ ಏಕತೆಗಾಗಿ ಕೆಲಸ ಮಾಡುತ್ತಿದೆ. 21ನೇ ಶತಮಾನದಲ್ಲಿ ಈ ಮೂರು ಅಂಶಗಳು ಇಲ್ಲದೆ ಶಕ್ತಿಶಾಲಿ ಭಾರತ ನಿರ್ಮಾಣ ಅಸಾಧ್ಯ ಎಂದರು. ಪಾಕಿಸ್ಥಾನದ ಹೆಸರೆತ್ತದೆ ಟೀಕಿಸಿದ ಮೋದಿ, ‘ಯುದ್ಧ ಗೆಲ್ಲಲು ಅಸಾಧ್ಯವಾದವರು ನಮ್ಮ ಏಕತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಸರ್ದಾರ್‌ ಪಟೇಲ್‌ ಅವರೇ ಒಂದು ಬಾರಿ ಹೇಳಿಕೊಂಡಿದ್ದಂತೆ ಕಾಶ್ಮೀರ ವಿಚಾರವನ್ನು ಅವರೇ ಸಮರ್ಥವಾಗಿ ನಿಭಾಯಿಸುತ್ತಿದ್ದರೆ, ಅತ್ಯಲ್ಪ ಸಮಯದಲ್ಲಿ ಅದನ್ನು ಪರಿಹರಿಸಲು ಸಾಧ್ಯವಾಗುತ್ತಿತ್ತು ಎಂದರು. ಈ ಮೂಲಕ ಮಾಜಿ ಪ್ರಧಾನಿ ನೆಹರೂ ಕಾರಣ ಎನ್ನುವುದನ್ನು ಪರೋಕ್ಷವಾಗಿ ಪ್ರಸ್ತಾವ ಮಾಡಿದರು.

ಭಯೋತ್ಪಾದನೆ ಹೊರಗಟ್ಟಲು ರಹದಾರಿ: ಅಮಿತ್‌ ಶಾ ಸಂವಿಧಾನದ 370ನೇ ವಿಧಿ, 35ಎ ಪರಿಚ್ಛೇದ ರದ್ದು ಮಾಡಿರುವುದು ದೇಶದಿಂದ ಭಯೋತ್ಪಾದನೆಯನ್ನು ಹೊರಗಟ್ಟಲು ಮಾಡಿದ ರಹದಾರಿ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಹೊಸವ ದಿಲ್ಲಿಯಲ್ಲಿ ಸರ್ದಾರ್‌ ಪಟೇಲ್‌ ಜನ್ಮ ದಿನ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶೇಷ ಸ್ಥಾನಮಾನ ರದ್ದು ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಮುಖ್ಯವಾಹಿನಿಯ ಜತೆಗೆ ವಿಲೀನ ಮಾಡುವ ಕನಸು ನನಸಾಗಿದೆ ಎಂದಿದ್ದಾರೆ. ಮಹಾತ್ಮಾ ಗಾಂಧಿಯವರೇ ಈ ಕೆಲಸವನ್ನು ಪಟೇಲ್‌ಗೆ ವಹಿಸಿದ್ದರು ಎಂದು ಶಾ ಪ್ರತಿಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next