ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಮೊದಲೇ ತಿಳಿಸಿದ್ದಂತೆ ವಿಶ್ವ ಮಹಿಳಾ ದಿನಾಚರಣೆಯಂದು ತನ್ನ ಎಲ್ಲಾ ಸಾಮಾಜಿಕ ಜಾಲತಾಣ ಖಾತೆಗಳನ್ನು ಒಂದು ದಿನದ ಮಟ್ಟಿಗೆ ಮಹಿಳಾ ಸಾಧಕಿಯರು ನಿರ್ವಹಿಸಲಿದ್ದಾರೆ ಎಂಬ ಮಾತಿನಂತೆ ಪ್ರಧಾನಿ ಮೋದಿ ಅವರು ಇಂದು ಫೇಸ್ವುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂಗಳಲ್ಲಿದ್ದ ತನ್ನ ಖಾತೆಗಳಿಂದ ಲಾಗೌಟ್ ಆಗಿದ್ದಾರೆ.
‘ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು. ನಾರಿ ಶಕ್ತಿಯ ಸಾಮರ್ಥ್ಯಕ್ಕೆ ನಮ್ಮ ನಮನಗಳು. ಈ ಹಿಂದೆ ನಾನು ಹೇಳಿಕೊಂಡಿರುವಂತೆ ಒಂದು ದಿನದ ಮಟ್ಟಿಗೆ ನಾನು ನನ್ನ ಜಾಲತಾಣ ಖಾತೆಗಳಿಂದ ಹೊರಬರುತ್ತಿದ್ದೇನೆ. ಏಳು ಜನ ಮಹಿಳೆಯರು ತಮ್ಮ ಜೀವನ ಪಯಣದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಹಾಗೂ ನನ್ನ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ನಿಮ್ಮೊಂದಿಗೆ ಸಂವಹನ ನಡೆಸಲಿದ್ದಾರೆ.’ ಎಂದು ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ ಮಾಡಿರುವ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಫುಡ್ ಬ್ಯಾಂಕ್ ಇಂಡಿಯಾದ ಸಂಸ್ಥಾಪಕಿ ಸ್ನೇಹಾ ಮೋಹನ್ ದಾಸ್ ಅವರು ಪ್ರಧಾನ ಮಂತ್ರಿ ಅವರ ಟ್ವಿಟ್ಟರ್ ಖಾತೆಯ ಮೂಲಕ ಮೊದಲ ಟ್ವೀಟ್ ಮಾಡಿದ್ದಾರೆ ಹಾಗೂ ಇಲ್ಲಿ ಆಕೆ ತನ್ನ ಕುರಿತಾಗಿ ಮತ್ತು ತನ್ನ ಸಾಧನೆಯ ಕುರಿತಾಗಿ ಮಾಹಿತಿ ನೀಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.