ಬಂಟ್ವಾಳ: ಕಳೆದ ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೋಡ್ ಶೋ ನಡೆಸಿದ್ದ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನ ಇದೀಗ ಬಂಟ್ವಾಳಕ್ಕೆ ಆಗಮಿಸಿದ್ದು, ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಈ ವಾಹನ ಗಮನ ಸೆಳೆಯಲಿದೆ.
ಇದು ತೆಲಂಗಾಣ ಮೂಲದ ಇಸುಝ್ ಕಂಪೆನಿಯ ಎಸ್ ಕ್ಯಾಬ್ ವಾಹನವಾಗಿದ್ದು, ರೋಡ್ ಶೋ/ಯಾತ್ರೆಗಳನ್ನು ನಡೆಸುವ ಸಂದರ್ಭ ಹಿಂಬದಿಯಲ್ಲಿ ನಿಂತು ಸಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜತೆಗೆ ವಾಹನದಲ್ಲಿ ಲೈಟಿಂಗ್ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.
ಹೀಗಾಗಿ ಜ. 14ರಿಂದ 26ರ ವರೆಗೆ ನಡೆಯಲಿರುವ ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ ಪಾದಯಾತ್ರೆಯ ಸಂದರ್ಭದಲ್ಲಿ ಉಪಯೋಗಿಸುವ ದೃಷ್ಟಿಯಿಂದ ಶಾಸಕರು ಈ ವಾಹನವನ್ನು ಇಸುಝ್ ಕಂಪೆನಿಯ ಮೂಲಕ ತರಿಸಿಕೊಂಡಿದ್ದಾರೆ. ರವಿವಾರ ಈ ವಾಹನ ಆಗಮಿಸಿದ್ದು, ಜ. 20ರ ವರೆಗೆ ಇದೇ ವಾಹನ ಬಂಟ್ವಾಳದ ಪಾದಯಾತ್ರೆಯಲ್ಲಿ ಬಳಕೆಯಾಗಲಿದೆ. ಬಳಿಕ ಇದೇ ಮಾದರಿಯ ಹೊಸ ಕಾರು ಪಾದಯಾತ್ರೆಗೆ ಆಗಮಿಸಲಿದೆ ಎನ್ನಲಾಗಿದೆ.
ಬಿಜೆಪಿ ಪಕ್ಷದ ಚಿಹ್ನೆ, ಬಾವುಟ, ನಾಯಕರುಗಳ ಫೋಟೋಗಳನ್ನು ವಿನ್ಯಾಸಗೊಳಿಸಲಾಗಿದ್ದು, ಜತೆಗೆ ಬಣ್ಣವನ್ನೂ ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ-ಅಮಿತ್ ಷಾ ರೋಡ್ ಶೋ ನಡೆಸಿದ ವಾಹನ ಬಂಟ್ವಾಳದ ಪಾದಯಾತ್ರೆಯಲ್ಲಿ ಬಳಕೆಯಾಗುವುದು ವಿಶೇಷವಾಗಿದ್ದು, ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಈ ವಾಹನಕ್ಕೆ ಇನ್ನಷ್ಟು ಬೇಡಿಕೆ ಬರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಮಲ್ಪೆ: ಸ್ಕೂಟರ್ ಸವಾರನನ್ನು ಎಳೆದೊಯ್ದ ಕಾರು, ಸವಾರ ಪವಾಡ ಸದೃಶ ಪಾರು