Advertisement

ಸಂಶೋಧನೆಯ ವೇಗ ಹೆಚ್ಚಿಸಿ ; ಸಂಸ್ಥೆಗಳು, ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ

03:35 AM May 07, 2020 | Hari Prasad |

ಹೊಸದಿಲ್ಲಿ: ಕೋವಿಡ್ ಸೋಂಕಿಗೆ ಲಸಿಕೆ ಅಭಿವೃದ್ಧಿ ವೇಳೆ ಉತ್ಕೃಷ್ಟ ಗುಣಮಟ್ಟ ಮತ್ತು ನೈತಿಕ ಮಾನದಂಡಗಳಿಗೆ ಆದ್ಯತೆ ನೀಡಬೇಕು. ಇದರ ಜತೆಗೆ ಸಂಶೋಧನೆಯ ವೇಗವನ್ನೂ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಶೋಧಕರು ಮತ್ತು ಸಂಸ್ಥೆಗಳಿಗೆ ಕರೆ ನೀಡಿದ್ದಾರೆ.

Advertisement

ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಕಾರ್ಯಪಡೆಯೊಂದಿಗೆ ಸಭೆ ನಡೆಸಿದ ಅವರು, ಅಭಿವೃದ್ಧಿ, ಔಷಧ ಸಂಶೋಧನೆ ಕುರಿತಂತೆ ಈವರೆಗಿನ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದರು.

ದೇಶದಲ್ಲಿ ಹೊಸ ಔಷಧಗಳು ಮತ್ತು ಲಸಿಕೆಗಳಿಗೆ ಸಂಬಂಧಿಸಿದ ನಿಯಂತ್ರಕ ವ್ಯವಸ್ಥೆಯು ಈಗಲೂ ಗೊಂದಲದಿಂದ ಕೂಡಿದೆ. ಈ ವಿಚಾರದಲ್ಲಿ ಬದಲಾವಣೆ ತರುವಂತೆ ಮತ್ತು ಮುಖ್ಯವಾಗಿ ಸಂಶೋಧನೆಯ ವೇಗ ಹೆಚ್ಚಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಕೋವಿಡ್ ಪರೀಕ್ಷೆ ಕಿಟ್‌, ಲಸಿಕೆ ಮತ್ತು ಔಷಧಗಳ ಸಂಶೋಧನೆಯಲ್ಲಿ ತೊಡಗಿರುವ ದೇಶದ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಸ್ಟಾರ್ಟ್‌ಅಪ್‌ಗಳ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಹೈದರಾಬಾದ್‌ ಸಂಸ್ಥೆ ಯತ್ನ: ಅಕ್ಷರಶಃ ಟೆಸ್ಟ್‌ ಟ್ಯೂಬ್‌ನಲ್ಲಿ ನಡೆಯುವ ವಿಟ್ರೊ ಟೆಸ್ಟಿಂಗ್‌ ನೆರವಿನಿಂದ ಮಾನವನ ಕೋಶ ರೇಖೆಗಳಲ್ಲಿ ಸಾರ್ಸ್‌-ಕೋವ್‌-2 ವೈರಾಣು ಬೆಳೆಸಿ, ಆ ಮೂಲಕ ಕೋವಿಡ್ ಸೋಂಕಿಗೆ ಪರಿಣಾಮಕಾರಿಯಾಗಿರುವ ಔಷಧ ಕಂಡುಹಿಡಿಯಲು ಹೈದರಾಬಾದ್‌ ಮೂಲದ ಸೆಂಟರ್‌ ಫಾರ್‌ ಸೆಲ್ಯುಲಾರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿ (ಸಿಸಿಎಂಬಿ) ಮುಂದಾಗಿದೆ.

Advertisement

ಕೋಶಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಸೆಲ್‌ ಥೆರಪಿ ಕಂಪೆನಿ ಎಸ್ಟೀಮ್‌ ರಿಸರ್ಚ್‌ ಪ್ರೈ. ಲಿ ಜತೆ ಸಿಸಿಎಂಬಿ ಸಹಭಾಗಿತ್ವ ಸಾಧಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಈ ಪ್ರಯತ್ನವು ಮಾನವನ ಮೇಲೆ ಹಿಂದೆಂದೂ ಆಗಿರದಂತಹ ಔಷಧಗಳ ಪ್ರಯೋಗಕ್ಕೆ ನಾಂದಿ ಹಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಭ್ಯತೆ ಪರಿಶೀಲಿಸಲು ಸೂಚನೆ
ಕೋವಿಡ್ ಸನ್ನಿವೇಶದಲ್ಲಿ ಐಸಿಯು ನಿರ್ವಹಣೆಗೆ ಮತ್ತು ಇನ್ನಿತರೆ ಪ್ರಮುಖ ಕಾಯಿಲೆಗಳಿಗೆ ಔಷಧ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಆರೋಗ್ಯ ಸಚಿವಾಲಯವು, ಅಖೀಲ ಭಾರತ ಔಷಧ ಮಾರಾಟ ವ್ಯಾಪಾರ ಒಕ್ಕೂಟಕ್ಕೆ (ಎಐಒಸಿಡಿ) ಪತ್ರ ಬರೆದಿದೆ.

ಕೋವಿಡ್ ರೋಗಿಗಳ ಐಸಿಯು ನಿರ್ವಹಣೆಗೆ 55 ಔಷಧಗಳು ಹಾಗೂ ವಿವಿಧ ಕಾಯಿಲೆಗಳಿಗೆ ಸಾಮಾನ್ಯವಾಗಿ ನೀಡಲಾಗುವ 96 ಔಷಧಗಳ ಪಟ್ಟಿಯನ್ನು ಸಚಿವಾಲಯ ಕಳುಹಿಸಿದೆ. ತುರ್ತು ಸಂದರ್ಭದಲ್ಲಿ ಔಷಧ ಕೊರತೆಯನ್ನು ತಪ್ಪಿಸಲು ಹೈಡ್ರೋಕ್ಸಿಕ್ಲೊರೊಕ್ವಿನ್‌ ಸೇರಿದಂತೆ ಪ್ರಮುಖ ಔಷಧಗಳು ಮಾರುಕಟ್ಟೆಯಲ್ಲಿ ಯಾವ ಪ್ರಮಾಣದಲ್ಲಿ ಲಭ್ಯ ಇವೆಯೆಂದು ಪರಿಶೀಲಿಸುವಂತೆ ಸೂಚಿಸ ಲಾಗಿದೆ. ವೈದ್ಯರ ಶಿಫಾರಸು ಇದ್ದರಷ್ಟೇ, ಹೈಡ್ರೋಕ್ಸಿಕ್ಲೊರೊಕ್ವಿನ್‌ ಮತ್ತು ಅಝಿತ್ರೊಮೈಸಿನ್‌ ಮಾತ್ರೆಗಳನ್ನು ವಿತರಿಸುವಂತೆ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next