ನವದೆಹಲಿ: ಮಹಾಮಾರಿ ಕೋವಿಡ್ 19 ವೈರಸ್ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸಿರುವಂತೆ ಭಾರತದಲ್ಲಿಯೂ ಈ ವೈರಸ್ ನ ಹಾವಳಿ ಸರ್ವವ್ಯಾಪಿಯಾಗುವ ಲಕ್ಷಣ ಕಂಡುಬರುತ್ತಿದೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈರಸ್ ವ್ಯಾಪಿಸದಂತೆ ತಡೆಯುವಲ್ಲಿ ಜನಸಾಮಾನ್ಯರ ಪಾತ್ರ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ಸರಕಾರವೂ ಸೇರಿದಂತೆ ಹಲವಾರು ಸಂಘಟನೆಗಳು ಮತ್ತು ಸೆಲೆಬ್ರಿಟಿಗಳು ದೇಶದ ಜನರಿಗೆ ಆದಷ್ಟು ಮನೆಬಿಟ್ಟು ಹೊರಬರದಂತೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
ದೆಹಲಿಯ ವೈದ್ಯರೊಬ್ಬರು ಕೋವಿಡ್ 19 ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರದರ್ಶಿಸಿದ್ದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.
ಕೋವಿಡ್ 19 ಪೀಡಿತರ ಆರೈಕೆಗಾಗಿ ನಿಯೋಜನೆಗೊಂಡಿರುವ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಅಮರಿಂದರ್ ಸಿಂಗ್ ಮಾಲ್ಹಿ ಎಂಬವರು ದೇಶದ ಜನರಿಗೆ ಮನವಿ ಮಾಡುತ್ತಾ, ‘ನಾನು ನಿಮಗಾಗಿ ಕರ್ತವ್ಯದಲ್ಲಿದ್ದೇನೆ, ನೀವು ನಮಗಾಗಿ ಮನೆಯಲ್ಲೇ ಇರಿ’ (I Stayed at work for you’ ‘You stay at home for us’) ಎಂಬ ಬರಹವಿದ್ದ ಪೋಸ್ಟರ್ ಹಿಡಿದಿದ್ದ ಫೊಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.
Related Articles
ವೈದ್ಯರ ಈ ಕಾಳಜಿ ಪೋಸ್ಟರ್ ಗೆ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ‘ವೆಲ್ ಸೆಡ್ ಡಾಕ್ಟರ್’ ಎಂದು ಪ್ರತಿಕ್ರಿಯಿಸಿದ್ದು, ಇದೇ ಸಂದರ್ಭದಲ್ಲಿ ಈ ಮಾರಕ ವೈರಸ್ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಶ್ರಮಿಸುತ್ತಿರುವ ವೈದ್ಯ ಸಮೂಹ ಸೇರಿದಂತೆ ಎಲ್ಲರಿಗೂ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಇವರೆಲ್ಲರ ಶ್ರಮವನ್ನು ಬಣ್ಣಸಲು ಪದಗಳೇ ಇಲ್ಲ ಎಂದು ಅವರು ವಿಶ್ವ ಸಮುದಾಯ ಆರೋಗ್ಯ ಸಿಬ್ಬಂದಿಗಳ ಶ್ರಮವನ್ನು ಕೊಂಡಾಡಿದ್ದಾರೆ.
ಡಾ. ಅಮರಿಂದರ್ ಸಿಂಗ್ ಅವರ ಈ ಟ್ವಿಟ್ಟರ್ ಪೋಸ್ಟ್ ಗೆ ಇದುವರೆಗೆ 71 ಸಾವಿರ ಲೈಕ್ ಗಳು ಸಿಕ್ಕಿದ್ದು 16,5400 ಸಲ ಇದು ರಿಟ್ವೀಟ್ ಆಗಲ್ಪಟ್ಟಿದೆ. ಬ್ರಿಟಿಷ್ ವೈಲ್ಡ್ ಲೈಫ್ ಸಾಹಸಿ ಬೇರ್ ಗ್ರಿಲ್ ಸಹಿತ ವಿಶ್ವದ ಹಲವರು ಈ ಪೋಸ್ಟ್ ಗೆ ತಮ್ಮ ಕಮೆಂಟ್ ಗಳನ್ನು ಹಾಕಿರುವುದು ವಿಶೇಷವಾಗಿದೆ.