Advertisement

ಪ್ರಧಾನಿ ಮೋದಿ ಭಾಷಣ: 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ

09:37 AM May 13, 2020 | Hari Prasad |

ನವದೆಹಲಿ: ಕೋವಿಡ್ ಸಂಬಂಧಿತ ಮೂರನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿರುವ ಸಂದರ್ಭದಲ್ಲಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ಆತ್ಮ ನಿರ್ಭರ ಭಾರತ’ ಎಂಬ ಹೊಸ ಪರಿಕಲ್ಪನೆಯನ್ನು ದೇಶವಾಸಿಗಳ ಮುಂದೆ ತೆರೆದಿಟ್ಟರು.

Advertisement

ಇದಕ್ಕೆ ಬಲ ತುಂಬುವ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಪ್ಯಾಕೇಜ್ ಒಂದರ ಘೋಷಣೆಯನ್ನೂ ಸಹ ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಮಾಡಿದರು.

ಪ್ರಧಾನಿ ಮೋದಿ ಅವರ ಭಾಷಣದ ಹೈಲೈಟ್ಸ್ ಇಲ್ಲಿದೆ.

– ನಮ್ಮ ಪೂರೈಕೆ ವ್ಯವಸ್ಥೆಯನ್ನು ನಾವಿಂದು ಸದೃಢಗೊಳಿಸಬೇಕಾಗಿದೆ.

– ನಾನಿಂದು ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದೇನೆ

Advertisement

– 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಇದಾಗಿದ್ದು ಇದು ನಮ್ಮ ಜಿಡಿಪಿಯ 10 ಪ್ರತಿಶತವಾಗಿದೆ.

– ಆತ್ಮ ನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಈ ಆರ್ಥಿಕ ಪ್ಯಾಕೇಜ್ ಸಹಕಾರಿಯಾಗಲಿದೆ. ನಮ್ಮ ಗ್ರಾಮೋದ್ಯೋಗ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನೂ ಸೇರಿದಂತೆ ಎಲ್ಲಾ ಉದ್ಯಮ ವಲಯಗಳಿಗೆ, ಶ್ರಮಜೀವಿಗಳಿಗೆ ಮತ್ತು ರೈತ ವರ್ಗಕ್ಕೆ ಬಲ ತುಂಬಲಿದೆ.

– ಮುಂದಿನ ದಿನಗಳಲ್ಲಿ ಕೇಂದ್ರ ವಿತ್ತ ಸಚಿವರು ಈ ಪ್ಯಾಕೇಜ್ ನ ವಿವರಗಳನ್ನು ನಿಮ್ಮ ಮುಂದೆ ಇಡಲಿದ್ದಾರೆ.

– ಎಲ್ಲಾ ಸರಕಾರಿ ಯಂತ್ರಗಳೂ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಜನಧನ್, ಆಧಾರ್ ಆಧಾರಿತ ವ್ಯವಸ್ಥೆ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಯ ಬಳಿಗೆ ಸರಕಾರದ ಸೌಲಭ್ಯವನ್ನು ತಲುಪಿಸಿದ ಉದಾಹರಣೆ ನಮ್ಮ ಮುಂದಿದೆ.

– ಈ ಪ್ಯಾಕೇಜ್ ನಮ್ಮ ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲಿದೆ.

– ಈ ಗಂಭೀರ ಸಮಸ್ಯೆಯ ಸಂದರ್ಭದಲ್ಲೂ ನಾವು ನಮ್ಮ ದೇಶದ ಜನಸಾಮಾನ್ಯರ ಮನೋಬಲದ ದರ್ಶನ ಮಾಡಿದ್ದೇವೆ. ಅವರೆಲ್ಲರೂ ಬಹಳಷ್ಟು ಕಷ್ಟಪಟ್ಟಿದ್ದಾರೆ, ತ್ಯಾಗ ಮಾಡಿದ್ದಾರೆ.

– ನಾವೆಲ್ಲರೂ ಇಂದು ದೇಶೀ ಉತ್ಪನ್ನಗಳಿಗೆ ಬಲ ತುಂಬಬೇಕಾಗಿದೆ. ನಾವು ದೇಶೀ ವಸ್ತುಗಳನ್ನು ಖರೀದಿಸುವುದು ಮಾತ್ರವಲ್ಲದೇ ಅದರ ಪ್ರಚಾರವನ್ನು ಮಾಡಬೇಕಾಗಿರುವುದೂ ನಮ್ಮ ಕರ್ತವ್ಯವಾಗಿದೆ.

– ಈ ಕೋವಿಡ್ ಬಹು ದಿನಗಳವರೆಗೆ ನಮ್ಮೊಂದಿಗೆ ಇರಲಿದೆ. ಹಾಗಾಗಿ ನಾವೆಲ್ಲರೂ ಸುರಕ್ಷಿತ ರೀತಿಯಲ್ಲಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.

– ಈ ಬಾರಿಯ ಲಾಕ್ ಡೌನ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ.

– ಈ ಕುರಿತಾದ ಮಾಹಿತಿ ಮೇ 17ರ ಒಳಗೆ ನಿಮಗೆ ನೀಡಲಾಗುವುದು.

– ನಾವು ಭಾರತವನ್ನು ಆತ್ಮ ನಿರ್ಭರ ಭಾರತವನ್ನಾಗಿಸುವಲ್ಲಿ ಎಲ್ಲರೂ ಕಾರ್ಯಮಗ್ನರಾಗೋಣ ; ಸುರಕ್ಷತೆ ನಮ್ಮ ಆದ್ಯತೆಯಾಗಲಿ

– ವೈರಸ್ ಒಂದು ವಿಶ್ವವನ್ನೇ ತಲ್ಲಣಗೊಳಿಸಿದೆ ಹಾಗೂ ವಿಶ್ವವೇ ಇದರ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ.

– 21ನೇ ಶತಮಾನ ಭಾರತದ್ದಾಗಿದೆ ಎಂದು ಎಲ್ಲರೂ ನಂಬಿದ್ದಾರೆ.

– ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಲಿ

– ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್ ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು.

– ಆದರೆ ಇಂದು ಭಾರತದಲ್ಲಿ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ.

– ವಿಶ್ವದಲ್ಲಿ ಇದೀಗ ಆರ್ಥಿಕ ಕೇಂದ್ರೀಕರಣ ವಿಕೇಂದ್ರಿಕೃತಗೊಂಡಿದೆ

– ವಸುದೈವ ಕುಟುಂಬ ಎಂಬುದು ನಮ್ಮ ಮೂಲಮಂತ್ರ. ಮತ್ತು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ.

– ಭಾರತದ ಪ್ರಗತಿ ವಿಶ್ವ ಪ್ರಗತಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಇದು ಪೋಲಿಯೋ ವಿಚಾರದಲ್ಲಿ, ಅಪೌಷ್ಠಿಕತೆ, ವಿಶ್ವ ಯೋಗ ದಿನ, ಸೌರ ಶಕ್ತಿ ಒಕ್ಕೂಟದ ವಿಚಾರಗಳಲ್ಲಿ ಈ ಅಂಶ ಈಗಾಗಲೇ ಸಾಬೀತುಗೊಂಡಿದೆ.

– ಪ್ರತೀ ಬಾರಿ ದೇಶ ಸಂಕಷ್ಟ ಒಂದರಿಂಧ ಪಾರಾಗುವ ಯತ್ನದಲ್ಲಿ ವಿಶ್ವವನ್ನೇ ಈ ಸಂಕಷ್ಟದಿಂದ ಪಾರು ಮಾಡಿಯೇ ಮುಂದುವರಿಯುತ್ತದೆ.

– ವಿಶ್ವ ಕಲ್ಯಾಣದ ರಸ್ತೆಯಲ್ಲಿ ನಮ್ಮ ನಿರ್ಧಾರ ಅಚಲವಾಗಿದೆ. ಈ ಶತಮಾನದ ಪ್ರಾರಂಭದಲ್ಲಿ ವೈ2ಕೆ ಸಂಕಟ ತಲೆದೋರಿದ್ದಾಗ ಆ ಸಂಕಟದಿಂದ ವಿಶ್ವವನ್ನು ಪಾರು ಮಾಡಿದ್ದು ಭಾರತದ ತಂತ್ರಜ್ಞರೇ.

– ಕಛ್ ಭೂಕಂಪದ ದಿನಗಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಎಲ್ಲವೂ ಧ್ವಂಸಗೊಂಡಿತ್ತು. ಅಲ್ಲಿ ಮೃತ್ಯು ಚಾದರ ಹಾಸಿದಂತಿತ್ತು ಪರಿಸ್ಥಿತಿ. ಇನ್ನೆಂದೂ ಕಛ್ ಎದ್ದು ನಿಲ್ಲದು ಅಂದುಕೊಂಡಿದ್ದಾಗಲೇ ಕಛ್ ದೇಶದ ಮುಂದೆ ಹೊಸ ರೂಪದಲ್ಲಿ ಎದ್ದು ನಿಂತಿತು. ಇದು ಭಾರತದ ಸಂಕಲ್ಪ ಶಕ್ತಿಯ ದ್ಯೋತಕವಾಗಿದೆ.

– ಭಾರತದ ಅತ್ಮ ನಿರ್ಭರತೆ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ: ಆರ್ಥಿಕತೆ, ಮೂಲಭೂತ ಸೌಲಭ್ಯ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಎಂಬುದೇ ಈ ಐದು ಆಧಾರ ಸ್ತಂಭಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next