Advertisement

ಪರೀಕ್ಷೆಗಳೇ ಅಂತಿಮವಲ್ಲ: ‘ಪರೀಕ್ಷಾ ಪೆ ಚರ್ಚಾ’ದಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನಿ ಕಿವಿಮಾತು

10:28 AM Jan 22, 2020 | Team Udayavani |

ಹೊಸದಿಲ್ಲಿ: ಪ್ರತಿಯೊಂದು ಮನೆಯಲ್ಲೂ ತಂತ್ರಜ್ಞಾನ ರಹಿತವಾಗಿರುವ ಕೊಠಡಿಯೊಂದಿರಲಿ. ಹೊರ ನೋಟಕ್ಕೆ ಚೆಂದವಾಗಿ ಕಾಣುವಂಥ ಪಠ್ಯೇತರ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲಾಗಿ, ವೈಯಕ್ತಿಕ ಆಸಕ್ತಿಯ ಮೇರೆಗೆ ಅಂಥ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳುವಂತಾಗಲಿ. ತರಗತಿಯ ಪರೀಕ್ಷೆಗಳೇ ಅಂತಿಮವಲ್ಲ, ಅವನ್ನು ಮೀರಿದ ಜೀವನಾವಕಾಶಗಳು ಸಾಕಷ್ಟಿವೆ…’

Advertisement

ದೇಶದ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಡೆಸಿಕೊಟ್ಟ ‘ಪರೀಕ್ಷಾ ಪೆ ಚರ್ಚಾ’ದ ತೃತೀಯ ಆವೃತ್ತಿಯಲ್ಲಿ ಮೋದಿಯವರು ವಿದ್ಯಾರ್ಥಿಗಳಿಗೆ ನೀಡಿದ ಪ್ರಮುಖ ಸಲಹೆಗಳಿವು.

ಅಲ್ಲದೆ, ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ‘ಯಾವುದೇ ಫಿಲ್ಟರ್‌ ಇಲ್ಲದ ಹ್ಯಾಷ್‌ಟ್ಯಾಗ್‌’ ಮೂಲಕ ಅಂದರೆ ಮುಕ್ತವಾಗಿ, ತಮ್ಮದೇ ಭಾಷೆ ಯಲ್ಲಿ ಹಂಚಿಕೊಳ್ಳಬೇಕೆಂದು ಕರೆ ನೀಡಿದರು. ಸುಮಾರು 2,000 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ, 50 ದಿವ್ಯಾಂಗರಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ತಂತ್ರಜ್ಞಾನದ ದಾಸರಾಗಬೇಡಿ: ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಅವುಗಳನ್ನು ನಿತ್ಯ ಜೀವನದಲ್ಲಿ ಬಳಸಿಕೊಳ್ಳಲೂ ಕಲಿತು ಕೊಳ್ಳಬೇಕು. ಆದರೆ, ಯಾವುದೇ ವಿದ್ಯಾರ್ಥಿ ತಂತ್ರ ಜ್ಞಾನದ ದಾಸನಾಗಬಾರದು ಎಂದು ಪ್ರಧಾನಿ ಕರೆ ನೀಡಿದರು. ಆ ಮೂಲಕ, ಮೊಬೈಲ್‌ ಗೇಮ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟಿಕ್‌ಟಾಕ್‌ಗಳಲ್ಲೇ ಮುಳುಗಿ ಹೋಗುವ ಯುವಜನತೆ ಯನ್ನು ಎಚ್ಚರಿಸುವ ಕೆಲಸ ಮಾಡಿದರು.

ಹಿನ್ನಡೆಯಿಂದ ಹತಾಶರಾಗಬೇಕಿಲ್ಲ: ಜೀವನದಲ್ಲಿ ಉತ್ತಮ ಪ್ರಯತ್ನದ ಹೊರತಾಗಿಯೂ ಕೆಲವು ವಿಷಯಗಳಲ್ಲಿ ನಾವು ವೈಫ‌ಲ್ಯ ಅನುಭವಿಸುತ್ತೇವೆ. ಅಂಥದ್ದೊಂದು ವೈಫ‌ಲ್ಯ ಎದುರಾದ ಕೂಡಲೇ ನಮಗೆ ಭವಿಷ್ಯದಲ್ಲಿ ಯಶಸ್ಸು ಸಿಗುವುದೇ ಇಲ್ಲ ಎಂದರ್ಥವಲ್ಲ. ಇದಕ್ಕಿಂತಲೂ ದೊಡ್ಡ ಯಶಸ್ಸು ಸಿಗುತ್ತದೆ ಎಂದು ನಾವು ತಿಳಿದುಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

Advertisement

ತಮ್ಮ ಮಾತಿಗೆ ಚಂದ್ರಯಾನ-2 ಯೋಜನೆಯನ್ನು ಉದಾಹರಣೆಯನ್ನಾಗಿ ನೀಡಿದ ಅವರು, ‘ಚಂದ್ರಯಾನ-2 ಯೋಜನೆ ಯಶಸ್ವಿಯಾಗುವುದು ಅನುಮಾನ. ಹಾಗಾಗಿ, ಅದರ ವೀಕ್ಷಣೆಗೆ ಬೆಂಗಳೂರಿನಲ್ಲಿರುವ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಹೋಗಬೇಡಿ ಎಂಬ ಸಲಹೆ ನನಗೆ ಬಂದಿತ್ತು. ಆದರೂ, ನಾನು ಅಲ್ಲಿಗೆ ಹೋಗಿ ಇಸ್ರೋ ಮುಖ್ಯಸ್ಥರಿಗೆ, ವಿಜ್ಞಾನಿಗಳಿಗೆ ಸಾಂತ್ವನ ಹೇಳಿಬಂದೆ” ಎಂದರು.

ಪೋಷಕರಿಗೂ ಕಿವಿಮಾತು: ಪೋಷಕರಿಗೂ ಕಿವಿಮಾತು ಹೇಳಿದ ಮೋದಿ, ‘ಮಕ್ಕಳನ್ನು ನಿಮಗಿಷ್ಟವಾದ ಹಾಗೂ ಹೊರನೋಟಕ್ಕೆ ಚಂದವಾಗಿ ಕಾಣಿಸುವ ಚಟುವಟಿಕೆಗಳಿಗೆ ಬಲವಂತವಾಗಿ ದಬ್ಬುವ ಪ್ರಯತ್ನ ಮಾಡಬೇಡಿ ಎಂದರು.

ಭಯ ಬಿಸಾಕಿ…: ಪರೀಕ್ಷಾ ಕೊಠಡಿಗೆ ನಿರ್ಭೀತರಾಗಿ ತೆರಳುವಂತೆ ಕರೆ ನೀಡಿದ ಪ್ರಧಾನಿ, ಬೇರೆಯವರು ಹೇಗೆ ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದನ್ನು ಗಮನಿಸುತ್ತಾ ಕೂರದೇ ನಾನು ಏನು ಬರೆಯುತ್ತೇನೆ ಎಂಬುದರ ಬಗ್ಗೆಯಷ್ಟೇ ಗಮನ ನೀಡಬೇಕು ಎಂದರು.

ರಾಹುಲ್‌, ಅನಿಲ್‌ ಕುಂಬ್ಳೆ ನೆನಪು
ಆತ್ಮಸ್ಥೈರ್ಯದ ಮಹತ್ವವನ್ನು ಮಕ್ಕಳಿಗೆ ತಿಳಿಹೇಳಿದ ಮೋದಿ, ‘2001ರಲ್ಲಿ ಭಾರತದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಭಾರತ ಸೋಲಿನ ಅಂಚನ್ನು ತಲುಪಿತ್ತು. ಆದರೆ, ರಾಹುಲ್‌ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ಜೋಡಿ 461 ರನ್‌ಗಳ ದೊಡ್ಡ ಜತೆಯಾಟವಾಡಿ, ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿತು. ಅವರಿಬ್ಬರ ಆಟವನ್ನು ಯಾರಾದರೂ ಮರೆಯಲು ಸಾಧ್ಯವೇ? ಗಾಯದ ಸಮಸ್ಯೆ ನಡುವೆಯೂ ಅನಿಲ್‌ ಕುಂಬ್ಳೆ ಅವರು 10 ವಿಕೆಟ್‌ ಕಬಳಿಸಿ ವಿಶ್ವದಾಖಲೆ ಮಾಡಿದ್ದರು. ಅದನ್ನು ಯಾರಾದರೂ ಮರೆಯಲು ಸಾಧ್ಯವೇ? ಆತ್ಮಶಕ್ತಿಯ ಮಹತ್ವವೇ ಇದು” ಎಂದರು.

ಬೆಳಗ್ಗೆಯೇ ಎದ್ದು ಓದಿ
‘ನಾನೊಬ್ಬ ರಾತ್ರಿ ಗೂಬೆ. ನನಗೆ ರಾತ್ರಿ ಓದುವುದೇ ಹೆಚ್ಚು ಇಷ್ಟ. ಬೆಳಗ್ಗೆ ಎದ್ದು ಓದುವುದೆಂದರೆ ಆಗಲ್ಲ. ಓದು ಬೇಗನೇ ತಲೆಗೆ ಹತ್ತಲು ಯಾವ ಸಮಯ ಹೆಚ್ಚು ಪ್ರಾಶಸ್ತ್ಯ” ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ನಾನು ಬೆಳಗ್ಗೆ ಬೇಗ ಏಳುತ್ತೇನೆ. ಆದರೆ, ತನ್ನ ಕೆಲಸ ಕಾರ್ಯಗಳಿಂದಾಗಿ ನಾನು ಬೇಗನೇ ಮಲಗಲು ಆಗುವುದಿಲ್ಲ. ಹಾಗಿರುವಾಗ ನಾನು ನಿನಗೆ ಹೇಗೆ ಸಲಹೆ ನೀಡಲಿ ಎನ್ನುವ ಮೂಲಕ ಚಟಾಕಿ ಹಾರಿಸಿದರು.

ಆನಂತರ, ಬೆಳಗ್ಗೆ ನಿದ್ರೆಯಿಂದ ಎದ್ದಾಗ ಮನಸ್ಸು ತಾಜಾ ಆಗಿರುತ್ತದೆ. ಹಾಗಾಗಿ, ಬೆಳಗಿನ ಓದೇ ಉತ್ತಮ” ಎಂದರು. ಇದೇ ವೇಳೆ, ‘ವಿದ್ಯಾರ್ಥಿಗಳು ನನ್ನನ್ನು ಅವರ ಆಪ್ತನೆಂದು ಭಾವಿಸಿದ್ದಾರೆ. ಹಾಗಾಗಿಯೇ ಅವರ ಸಂದೇಹಗಳನ್ನು ನನ್ನಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next